ದ್ವೇಷದ ಭಾವನೆ ಕೈಬಿಡಿ ರಾಜ್ಯ ಸರಕಾರಕ್ಕೆ ಪೇಜಾವರ ಶ್ರೀ ಒತ್ತಾಯ

Advertisement

ಮೂಲ್ಕಿ: ಪ್ರಪಂಚವೆಲ್ಲ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠೆಯ ಸಂಭ್ರಮದಲ್ಲಿದ್ದು, ಪೂರ್ವಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಆದರೆ ರಾಜ್ಯ ಸರ್ಕಾರ ಅಯೋಧ್ಯೆಗೆ ಸಂಬಂಧಿಸಿದ ಹಳೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದ್ದು, ಇದು ಸರಿಯಲ್ಲ. ಕೂಡಲೇ ರಾಜ್ಯ ಸರಕಾರ ಇಂತಹ ಪ್ರವೃತ್ತಿಯಿಂದ ದೂರ ಸರಿಯಬೇಕು ಎಂದು ಪೇಜಾವರ ಶ್ರೀಗಳು ಸರಕಾರವನ್ನು ಒತ್ತಾಯಿಸಿದ್ದಾರೆ.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮೂಲ್ಕಿ ಸಮೀಪದ ತಮ್ಮ ಹುಟ್ಟೂರಾದ ಪಕ್ಷಿಕೆರೆಯ ಚಂದ್ರಗಿರಿ ಮನೆಯಲ್ಲಿ ಪೇಜಾವರ ಶ್ರೀಗಳು ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಮೊದಲ ಹಂತದ ಕಾರ್ಯ ಮುಗಿದಿದ್ದು ಗರ್ಭಗುಡಿಯಲ್ಲಿ ಶ್ರೀ ದೇವರ ಪ್ರತಿಷ್ಠಾ ಕಾರ್ಯ ಜನವರಿ ೨೨ರಂದು ನಡೆಯಲಿದೆ.
ಕಾರ್ಯಕ್ರಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಆದರೆ ಅಯೋಧ್ಯೆಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಭಕ್ತರು ಆಯಾ ಗ್ರಾಮದ ದೇವಸ್ಥಾನಗಳಲ್ಲಿ ಪರದೆಯ ಮೂಲಕ ಅಯೋಧ್ಯೆಯ ಕಾರ್ಯಕ್ರಮಗಳನ್ನು ವೀಕ್ಷಿಸುವುದರ ಜೊತೆಗೆ ದೇವಸ್ಥಾನಗಳಲ್ಲಿ ಭಜನೆ ಹೋಮ ಹವನ ಅನ್ನ ಸಂತರ್ಪಣೆ ಹಾಗೂ ಸಂಜೆ ದೇವಸ್ಥಾನಗಳಲ್ಲಿ ದೀಪಗಳನ್ನು ಉರಿಸುವ ಮುಖಾಂತರ ದೀಪಾವಳಿ ಆಚರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.