ಧಾರವಾಡ: ಭೂಮಿಯಲ್ಲಿ ಇರುವ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಿದೆ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜಯೋಗಿಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಇಲ್ಲಿಯ ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿನಿಂದ ನಾಡಿನತ್ತ ಪ್ರಾಣಿಗಳು ಬರುವದು ಹೆಚ್ಚುತ್ತವೆ ಎಂದರು.
ಈ ಸಂವತ್ಸರದ ಕೊನೆವರೆಗೂ ಈ ತೊಂದರೆ ಇದೆ. ಅಚ್ಚರಿಯ ಅವಘಡ ಕಾದಿದೆ. ಬೆಂಕಿಯಿಂದ ಹೆಚ್ಚು ಸಮಸ್ಯೆ ಇದೆ. ಅಪಮೃತ್ಯು ಹೆಚ್ಚಾಗಲಿವೆ. ಒಂದೆಡೆ ಪ್ರಕೃತಿ ವಿಕೋಪ ಇನ್ನೊಂದೆಡೆ ಮತಾಂಧತೆ ಹೆಚ್ಚಾಗಿ ಸಮಾಜದಲ್ಲಿ ಅಶಾಂತಿ, ಕಲಹಗಳು ನಡೆಯಲಿವೆ. ಕೊರೊನಾ ಹೋಗುವ ಸಂದರ್ಭದಲ್ಲಿ ಜಗತ್ತಿನಲ್ಲಿ ವಿಪರೀತ ಕ್ಷಾಮ ಉಂಟುಮಾಡಿ ಹೋಗುತ್ತದೆ. ಪಾರ್ಶ್ವವಾಯು, ಹೃದಯಾಘಾತ ಕಾಯಿಲೆಯಿಂದ ಹೆಚ್ಚು ಸಾವುನೋವು ಸಂಭವಿಸುತ್ತವೆ ಎಂದರು.
ಈಗ ಸರಕಾರ ಚೆನ್ನಾಗಿ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಭವಿಷ್ಯ ಹೇಳುತ್ತೇನೆ. ಈಗ ರಾಜಕೀಯ ಬದಲಾವಣೆ ಕುರಿತು ಏನನ್ನೂ ಹೇಳುವುದಿಲ್ಲ ಎಂದು ನಸುನಕ್ಕು ಸುಮ್ಮನಾದರು.