ಧಾರವಾಡ ಜಿಲ್ಲೆಯಲ್ಲಿ ಶಾಖಾಘಾತ, ಬಿಸಿಗಾಳಿ ದಾಳಿ

Advertisement

ವಿಶ್ವನಾಥ ಕೋಟಿ
ಧಾರವಾಡ: ಸುಡುಬಿಸಿಲಿನಿಂದ ಜಿಲ್ಲೆಯ ಜನರು ಬಸವಳಿದಿದ್ದು, ದಿನದಿಂದ ದಿನಕ್ಕೆ ಉಷ್ಣತೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಮಾರ್ಚ್, ಏಪ್ರಿಲ್‌ನ ರಣಗುಡುವ ಬಿಸಿಲು ಅನುಭವಿಸಿದ ಜನರು ಮೇ ತಿಂಗಳನ್ನು ಹೇಗೆ ಕಳೆಯುವುದು ಎಂದು ಚಿಂತಿತರಾಗಿದ್ದಾರೆ.
`ಕರ್ನಾಟಕದ ಮಹಾಬಲೇಶ್ವರ’ ಎಂದೇ ಖ್ಯಾತಿ ಪಡೆದು ತಂಪು ವಾತಾವರಣದಿಂದ ಬ್ರಿಟಿಷರ ಪ್ರಮುಖ ನೆಲೆಯಾಗಿದ್ದ ಧಾರವಾಡ ಈಗ ಉರಿಬಿಸಿಲಿನ ಧಾರವಾಡವಾಗಿ ಮಾರ್ಪಟ್ಟಿದೆ.
ಉಷ್ಣತೆ ೪೦ ಸೆಂ. ಆಸುಪಾಸಿನಲ್ಲಿದ್ದು, ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ತೊಂದರೆಯಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಉರಿಬಿಸಿಲು ಈ ಬಾರಿ ಧಾರವಾಡ ಜಿಲ್ಲೆಯಲ್ಲಿದ್ದು, ಏಕಾಏಕಿ ಬಿಸಿಲು ಹೆಚ್ಚಳಕ್ಕೆ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಕೆರೆಗಳು ಬತ್ತಿಹೋಗಿದ್ದು, ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ. ಇದರಿಂದ ತೋಟಗಾರಿಕಾ ಬೆಳೆ ಅವಲಂಬಿತರಿಗೂ ಸಮಸ್ಯೆಯಾಗಿದೆ. ಬಿರುಬಿಸಿಲು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೆ, ಇನ್ನೊಂದೆಡೆ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಹಲವು ಬಡಾವಣೆಗಳಿಗೆ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ನೀರಿಗಾಗಿ ಧಾರವಾಡದ ಜನರು ಟ್ಯಾಂಕರ್‌ಗಳ ಮೊರೆಹೋದರೆ, ಗ್ರಾಮೀಣ ಭಾಗದಲ್ಲಿ ಜನರು ಕೊಡಗಳನ್ನು ಬಂಡಿಗಳಲ್ಲಿಟ್ಟುಕೊಂಡು ನೀರಿಗಾಗಿ ಅಲೆಯುವುದು ಸಾಮಾನ್ಯವಾಗಿದೆ.
ಕಳೆದ ವಾರ ಅಲ್ಪಪ್ರಮಾಣದ ಮಳೆಯಾಗಿದ್ದರಿಂದ ಮುಂಗಾರಿನ ಬಿಸಿಲಿನ ತಾಪವನ್ನು ಕಡಿಮೆ ಮಾಡಬಹುದೆಂದೇ ಅಂದಾಜಿಸಲಾಗಿತ್ತು. ಆದರೆ ಅಡ್ಡಮಳೆ ಜಿಲ್ಲೆಯ ಪ್ರಸಿದ್ಧ ಮಾವಿನಬೆಳೆ ಮೇಲೆ ಗದಾಪ್ರಹಾರ ಮಾಡಿ ಮರೆಯಾಯಿತು. ಸದ್ಯಕ್ಕಂತೂ ಮಳೆಯ ಮುನ್ಸೂಚನೆಯಿಲ್ಲ. ಇನ್ನಷ್ಟು ದಿನ ಬಿಸಿಗಾಳಿಯ ದಾಳಿಯನ್ನು ಎದುರಿಸುವುದು ಅನಿವಾರ್ಯವಾಗಿದೆ. ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದು, ಉಷ್ಣತೆ ಹೆಚ್ಚಳ ಕುರಿತು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.