ಧಾರವಾಡ ಸಾಂಸ್ಕೃತಿಕ ರಾಜಧಾನಿಯನ್ನಾಗಿ ರೂಪಿಸಲು ಬದ್ಧ; ಕೇಂದ್ರ ಸಚಿವ ಮೇಘವಾಲ

ಮೇಘವಾಲ
Advertisement

ಧಾರವಾಡ: ಸಂಗೀತ ಕ್ಷೇತ್ರದ ರಾಜಧಾನಿ ಎಂದೇ ಪರಿಗಣಿತವಾದ ಧಾರವಾಡವನ್ನು ಸಾಂಸ್ಕೃತಿಕ ರಾಜಧಾನಿಯನ್ನಾಗಿಯೂ ರೂಪಿಸಲು ಸಾಂಸ್ಕೃತಿಕ ಸಚಿವಾಲಯ ಬದ್ಧವಾಗಿದೆ ಎಂದು ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ರಾಜ್ಯ ಸಚಿವ ಅರ್ಜುನರಾಮ ಮೇಘವಾಲ ಹೇಳಿದರು.
ನಗರದ ಕೋರ್ಟ್ ಸರ್ಕಲ್ ಬಳಿಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆವರಣದಲ್ಲಿ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು,
ಸಂಗೀತ-ನಾಟಕ ಅಕಾಡೆಮಿ ಪ್ರಾದೇಶಿಕ ಕೇಂದ್ರ, ಸಾಂಸ್ಕೃತಿಕ ಸಂಪನ್ಮೂಲಗಳು ಹಾಗೂ ತರಬೇತಿ ಕೇಂದ್ರ ಸೇರಿದಂತೆ ಕಲೆ, ಸಂಸ್ಕೃತಿ ಸಂಬಂಧಿತ ಪ್ರಾದೇಶಿಕ ಕೇಂದ್ರಗಳನ್ನು ಧಾರವಾಡದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.
ಲಲಿತಕಲಾ ಅಕಾಡೆಮಿ ಕೇಂದ್ರ ಬಂದ ನಂತರ ಅದಕ್ಕೆ ಸಂಬಂಧಿತ ಇತರ ಕ್ಷೇತ್ರಗಳ ಕೇಂದ್ರಗಳು ಇಲ್ಲಿಗೆ ಬರಬೇಕು. ಕಲಾವಿದರು ಕೇಂದ್ರದ ಪ್ರಯೋಜನ ಪಡೆದುಕೊಂಡು ವಿಶ್ವಮಟ್ಟದ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಧಾರವಾಡ ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದೆ. ಕುಮಾರ ಗಂಧರ್ವ, ಡಾ. ಗಂಗೂಬಾಯಿ ಹಾನಗಲ್, ಡಾ. ಭೀಮಸೇನ ಜೋಶಿ, ಡಾ. ಮಲ್ಲಿಕಾರ್ಜುನ ಮನಸೂರ ಸಂಗೀತ ಲೋಕವನ್ನು ಸಿರಿವಂತಗೊಳಿಸಿದ್ದಾರೆ ಎಂದರು.
ಶಾಸ್ತ್ರೀಯ ಭಾಷೆಯನ್ನು ಬೆಳೆಸಲು ಸಚಿವಾಲಯದಿಂದ ಅಗತ್ಯ ಅನುದಾನ ನೀಡಲಾಗುತ್ತಿದ್ದು, ಕನ್ನಡ ಭಾಷೆಯ ಸಾಹಿತ್ಯ ಗೋಷ್ಠಿಗಳು, ವಿಚಾರ ಸಂಕಿರಣಗಳನ್ನು ಆಯೋಜನೆ ಮಾಡಬೇಕು ಎಂದು ತಿಳಿಸಿದರು.