ಧ್ಯಾನದಲ್ಲಿ ಭಗವದ್ರೂಪಗಳ ಚಿಂತನೆ

Advertisement

ಇದಂ ಶರೀರಂ ಖಲು ಧರ್ಮ ಸಾಧನಂ’ ಎಂಬುದು ಆರ್ಷವಾಕ್ಯವಿದೆ. ಈ ಶರೀರ ಧರ್ಮ ಸಾಧನೆಗೆ ಉತ್ತಮವಾದ ಮಾಧ್ಯಮವಾಗಿದೆ.
ದೇಹ ಮತ್ತು ಮನಸ್ಸಿಗೆ ಅಲ್ಲದೇ ಪುಣ್ಯಪ್ರಾಪ್ತಿಗಾಗಿ ಧ್ಯಾನ ಮನಸ್ಸಿನ ಆರೋಗ್ಯಕ್ಕೆ ಒಂದು ಉತ್ತಮವಾದ ಕ್ರಿಯೆ. ಏನನ್ನು ಧ್ಯಾನ ಮಾಡಬೇಕು? ಎಂಬ ಪ್ರಶ್ನೆಗೆ ಏನೆಲ್ಲ ಉತ್ತರಗಳನ್ನು ನೀಡಲಾಗುತ್ತದೆ. ಆದರೆ ಯಾವುದರ ಧ್ಯಾನ ಮಾಡುವದರಿಂದ ಇಹ ಮತ್ತು ಪರಕೆ ಸಾಧನವಾಗುವದೋ ಆ ಚೈತನ್ಯದ ಧ್ಯಾನ ಮಾಡಬೇಕು. ಅದು ಭಗವಂತನ ಧ್ಯಾನ. ಭಗವಂತನ ರೂಪಗಳು ಹಲವು ಅಸಂಖ್ಯ. ಅಂಥದರಲ್ಲಿ ದೇಹದೊಳಗಿನ ಎಲ್ಲ ೭೨ ಸಾವಿರ ನಾಡಿಗಳಲ್ಲಿ ಭಗವಂತ ಬೇರೆ ಬೇರೆ ರೂಪಗಳಲ್ಲಿ ಸನ್ನಿಹಿತವಾಗಿದ್ದಾನೆ.
ಹಾಗಾದರೆ ಎಲ್ಲ ನಾಡಿಗಳ ಉಗಮಸ್ಥಾನ ಎಲ್ಲಿದೆ? ಎಂದರೆ ನಾಭಿಯ ಕೆಳಗೆ ಗುದದ್ವಾರ ಹಾಗೂ ವೃಷಣಗಳ ಮಧ್ಯಪ್ರದೇಶದಲ್ಲಿ ಎರಡು ಅಂಗುಲ ದೀರ್ಘವಾಗಿ, ನಾಕು ಅಂಗುಲ ವಿಸ್ತಾರವಾಗಿ, ವರ್ತುಲಾಕಾರದ ಒಂದು ಗೆಡ್ಡೆಯು ಇರುತ್ತದೆ. ಇದೆ ಎಲ್ಲ ನಾಡಿಗಳ ಉಗಮಸ್ಥಾನ.
ಈ ಉಗಮಸ್ಥಾನದಿಂದ ಸುಷಮ್ನಾ ನಾಡಿಯು ನೇರವಾಗಿ ಮೇಲ್ಮುಖವಾಗಿ ನಿಂತಿದೆ. ಸುಷಮ್ನಾ ನಾಡಿಯ ಮೂಲಪ್ರದೇಶ, ನಾಭಿಪ್ರದೇಶ, ಹೃದಯ ಪ್ರದೇಶ, ಇಂದ್ರಯೋನಿ, ಭ್ರೂ ಮಧ್ಯ, ಶಿರಸ್ಸು ಎಂಬ ಆರು ಸ್ಥಳಗಳಲ್ಲಿ ಭಗವಂತನು ವಿಶೇಷವಾಗಿ ಸನ್ನಿಹಿತನಾಗಿದ್ದಾನೆ.
ಪ್ರತಿಯೊಂದು ಕಡೆಯೂ ಒಂದೊಂದು ಕಮಲವಿದೆ. ಅದರಲ್ಲಿ ಭಗವಂತನು ನೆಲೆಸಿದ್ದಾನೆ. ಮೂಲಾಧಾರದಲ್ಲಿ ನಾಲ್ಕು ದಳ ಕಮಲವಿದೆ. ನಾಭಿಪ್ರದೇಶದಲ್ಲಿ ಆರುದಳ ಕಮಲವಿದೆ. ಹೃದಯದಲ್ಲಿ ಎಂಟುದಳ ಕಮಲವಿದೆ. ಇಂದ್ರಯೋನಿಯಲ್ಲಿ ಹನ್ನೆರಡು ದಳ ಕಮಲವಿದೆ. ಭೂಮಧ್ಯದಲ್ಲಿ ಎರಡುದಳ ಕಮಲವಿದೆ. ಶಿರಸ್ಸಿನಲ್ಲಿ ಸಹಸ್ರದಳ ಕಮಲವಿದೆ. ಪ್ರತಿಯೊಂದು ಕಮಲಗಳಲ್ಲಿಯೂ ಭಗವಂತನು ಒಂದೊಂದು ರೂಪಗಳಿಂದ ನೆಲೆಸಿದ್ದಾನೆ. ಮೂಲ, ನಾಭಿ, ಹೃದಯ ಈ ಸ್ಥಾನಗಳಲ್ಲಿರುವ ಕಮಲಗಳು ಕೆಂಪು ಬಣ್ಣದಲ್ಲಿವೆ. ಉಳಿದ ಮೂರು ಶ್ವೇತವರ್ಣದಲ್ಲಿವೆ.
ಐದುಸ್ಥಳಗಳಲ್ಲಿ ಕ್ರಮವಾಗಿ ಭಗವಂತನ ಪ್ರದ್ಯುಮ್ನ, ಅನಿರುದ್ಧ, ವಾಸುದೇವ, ಸಂಕಷಣ, ನಾರಾಯಣ ಎಂಬ ಭಗವದ್ರೂಪಗಳು ನೆಲೆಸಿವೆ.
ಪ್ರತಿಯೊಂದು ಕಮಲಗಳಿರುವ ಸ್ಥಳಗಳಲ್ಲಿ ಸುಷಮ್ನಾ ನಾಡಿಯ ನಾಕು ದಿಕ್ಕುಗಳಲ್ಲಿ ಇಡಾ, ಪಿಂಗಳಾ, ವಜ್ರಕಾ, ಧಾರಿಣೀ ಎಂಬ ಉಪನಾಡಿಗಳಿವೆ. ಅವುಗಳಲ್ಲಿ ಪಂಚರೂಪಿಯಾದ ಭಗವಂತನು ನೆಲೆಸಿದ್ದಾನೆ.
ಮೂಲಾಧಾರದಲ್ಲಿ ಪ್ರದ್ಯುಮ್ನನು ಮಧ್ಯದಲ್ಲಿದ್ದರೆ, ಉಳಿದ ನಾಕು ದಿಕ್ಕುಗಳಲ್ಲಿ ಅನಿರುದ್ಧ, ವಾಸುದೇವ, ಸಂಕರ್ಷಣ ಹಾಗೂ ನಾರಾಯಣರೂಪಗಳು ನೆಲೆಸಿವೆ. ನಾಭಿ-ಪ್ರದೇಶದಲ್ಲಿ ಅನಿರುದ್ಧರೂಪಿಯಾದ ಭಗವಂತನು ಮಧ್ಯದಲ್ಲಿದ್ದು, ಉಳಿದ ಪೂರ್ವಾದಿ ನಾಕು ದಿಕ್ಕುಗಳಲ್ಲಿ ಪ್ರದ್ಯುಮ್ನ, ವಾಸುದೇವ, ಸಂಕಷಣ ಹಾಗೂ ನಾರಾಯಣ ರೂಪಗಳಿವೆ.
ಹೃದಯದಲ್ಲಿ ವಾಸುದೇವನು ಮಧ್ಯದಲ್ಲಿ ನೆಲೆಸಿದ್ದಾನೆ. ಪ್ರದ್ಯುಮ್ನ, ವಾಸುದೇವ, ಸಂಕಷಣ, ನಾರಾಯಣರೂಪಗಳು ಉಳಿದ ನಾಕು ದಿಕ್ಕುಗಳಲ್ಲಿವೆ. ಇಂದ್ರಯೋನಿಯಲ್ಲಿ ಸಂಕಷಣನು ಮಧ್ಯದಲ್ಲಿದ್ದಾನೆ. ಉಳಿದ ನಾಕು ದಿಕ್ಕುಗಳಲ್ಲಿ, ಪ್ರದ್ಯುಮ್ನ, ಅನಿರುದ್ಧ, ವಾಸುದೇವ ಹಾಗೂ ನಾರಾಯಣರೂಪಗಳಿವೆ. ಶಿರಸ್ಸಿನಲ್ಲಿ ನಾರಾಯಣನು ಮಧ್ಯಪ್ರದೇಶದಲ್ಲಿದ್ದಾನೆ. ಉಳಿದ ನಾಕು ದಿಕ್ಕುಗಳಲ್ಲಿ ಪ್ರದ್ಯುಮ್ನ, ಅನಿರುದ್ಧ, ವಾಸುದೇವ, ಹಾಗೂ ಸಂಕಷಣ-ರೂಪಗಳು ನೆಲೆಸಿವೆ. ಹೀಗೆ ಐದು ಸ್ಥಾನಗಳಲ್ಲಿ ಭಗವಂತನ ಐದು ರೂಪಗಳ ಚಿಂತನೆಯನ್ನು ಮಾಡಬೇಕು.
ಮೂಲಾಧಾರದಲ್ಲಿ ಸ್ವಾಯಂಭುವ ಮನುವು ಪ್ರದ್ಯುಮ್ನನ ಸೇವೆಯನ್ನು ಮಾಡುತ್ತಿದ್ದಾನೆ. ನಾಭೀ ಪ್ರದೇಶದಲ್ಲಿ ಗಣಪತಿಯು ಅನಿರುದ್ಧನ ಸೇವೆಯಲ್ಲಿ ನಿರತನಾಗಿದ್ದಾನೆ. ಹೃದಯದಲ್ಲಿ ಇಂದ್ರದೇವರು ವಾಸುದೇವನನ್ನು ಆರಾಧನೆ ಮಾಡುತ್ತಿದ್ದಾರೆ. ಕಂಠಪ್ರದೇಶದಲ್ಲಿ ಶೇಷದೇವರು ಸಂಕಷಣನನ್ನು ಸೇವೆ ಮಾಡುತ್ತಿದ್ದಾರೆ. ಭ್ರೂ ಮಧ್ಯದಲ್ಲಿ ಗರುಡದೇವರು ಶ್ರೀಕೃಷ್ಣನ ಸೇವೆಯಲ್ಲಿ ನಿರತರಾಗಿದ್ದಾರೆ. ಶಿರಸ್ಸಿನಲ್ಲಿ ಚತುರ್ಮುಖ ಬ್ರಹ್ಮದೇವರು ನಾರಾಯಣನ ಸಹಸ್ರ ರೂಪಗಳ ಸೇವೆಯಲ್ಲಿ ನಿರತರಾಗಿದ್ದಾರೆ.
ಮೂಲಾಧಾರದಲ್ಲಿ ತ್ರಿಕೋಣ ಮಂಡಲವಿದೆ. ನಾಭಿಯಲ್ಲಿ ಷಟ್ಕೋಣ ಮಂಡಲವಿದೆ. ಹೃದಯದಲ್ಲಿ ದ್ವಾದಶ ಕೋಣವಿದೆ. ಇಂದ್ರಯೋನಿಯಲ್ಲಿ ದ್ವಾದಶ-ಕೋಣವಿದೆ. ಭ್ರೂಮಧ್ಯದಲ್ಲಿ ವರ್ತುಲ ಮಂಡಲವಿದೆ. ಶಿರಸ್ಸಿನಲ್ಲಿ ತ್ರಿಕೋಣ ಮಂಡಲವಿದೆ.
ಹೀಗೆ ಆರು ಮಂಡಲಗಳನ್ನು ಚಿಂತಿಸಬೇಕು. ನಾಭಿಪ್ರದೇಶದಲ್ಲಿರುವ ಷಟ್‌ಕೋಣ ಮಂಡಲದಲ್ಲಿ ವಾಯುದೇವರು ಇದ್ದು, ನಾವು ಮಾಡುವ ಎಲ್ಲ ಪಾಪಗಳನ್ನು ಶೋಷಣೆ ಮಾಡುವರು. ಆದ್ದರಿಂದಲೇ ‘ಯಂ’ ಎಂಬ ಬೀಜಮಂತ್ರವನ್ನು ಹೇಳುತ್ತಾ, ಜಪಕಾಲದಲ್ಲಿ ಪಾಪಪುರುಷನನ್ನು ಶೋಷಣೆ ಮಾಡುವ ಸಂಪ್ರದಾಯವು ಇರುತ್ತದೆ. ಧ್ಯಾನದ ಅನುಸಂಧಾನ ಹೀಗೆ ಇದ್ದಲ್ಲಿ ವಿಶೇಷ ಪುಣ್ಯಪ್ರಾಪ್ತಿಯಾಗುವದಲ್ಲದೇ ಶರೀರಕ್ಕೆ ಒಂದು ರೀತಿಯ ಅಮೂಲ್ಯವಾದ ಶಕ್ತಿ ದೊರಕುತ್ತದೆ.