ನಕಲಿ ಆಧಾರ್, ಪಡಿತರ ಚೀಟಿ, ಅಂಕಪಟ್ಟಿ ಸೃಷ್ಟಿ: ಖದೀಮ ಸೆರೆ

Advertisement

ಮಂಗಳೂರು: ಆಧಾರ್, ಪಡಿತರ ಚೀಟಿ, ಅಂಕಪಟ್ಟಿ ಮತ್ತಿತರ ಅತ್ಯಮೂಲ್ಯ ದಾಖಲೆ ಪತ್ರಗಳನ್ನೇ ಸೃಷ್ಟಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ನಗರದ ಕಂಕನಾಡಿ ಪಂಪ್‌ವೆಲ್ ಹಳೆ ರಸ್ತೆಯ ವಿಶ್ವಾಸ್ ಕ್ರೌನ್ ಅಪಾರ್ಟ್‌ಮೆಂಟ್‌ನ ನೆಲ ಅಂತಸ್ತಿನಲ್ಲಿ “ಹೆಲ್ಪ್‌ಲೈನ್ ಮಂಗಳೂರು” ಎಂಬ ಹೆಸರಿನ ಅಂಗಡಿ ಇಟ್ಟುಕೊಂಡು ನಕಲಿ ದಾಖಲಾತಿಗಳನ್ನು ತಯಾರಿಸಿಕೊಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಕರ್ನಕಟ್ಟೆ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೇನಸ್ (೪೧) ಬಂಧಿತ ವ್ಯಕ್ತಿ.
ಈತನ ಕಚೇರಿಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ನಕಲಿ ಶೈಕ್ಷಣಿಕ ದಾಖಲೆ ಪತ್ರಗಳು, ಜನನ ಪ್ರಮಾಣಪತ್ರ ಇತ್ಯಾದಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದ. ಅವನ್ನೇ ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
ದಾಳಿ ಸಂದರ್ಭದಲ್ಲಿ ವಿವಿಧ ಹೆಸರುಗಳಲ್ಲಿ ತಯಾರಿಸಿಟ್ಟಿದ್ದ ನಕಲಿ ಆಧಾರ್ ಕಾರ್ಡ್‌ಗಳು, ನಕಲಿ ಪಡಿತರ ಚೀಟಿ, ನಕಲಿ ಉದ್ದಿಮೆ ಪರವಾನಿಗೆ ಪತ್ರ, ನಕಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಮೂರು ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದವರು ಬ್ಯಾಂಕ್ ಇನ್ನಿತರ ಕಚೇರಿಗಳಿಗೆ ಸಾಲ ಸೌಲಭ್ಯಕ್ಕಾಗಿ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿದ್ದಾರೆ. ಆ ಮೂಲಕ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ್ದಾನೆ.
ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಲ್ಯಾಪ್‌ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್, ಬಯೋಮೆಟ್ರಿಕ್ ಡಿವೈಸ್‌ಗಳನ್ನು ವಶಪಡಿಸಲಾಗಿದೆ. ನಕಲಿ ದಾಖಲೆ ಪತ್ರ ತಯಾರಿ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ.