ನಕಲಿ ಕಾರ್ಮಿಕ ಕಾರ್ಡ್ ಬಿಚ್ಚಿಟ್ಟ ಅಸಲಿ ಸತ್ಯ

Advertisement

ವಿಧಾನ ಪರಿಷತ್: ರಾಜ್ಯದಲ್ಲಿ ಲಕ್ಷಾಂತರ ಜನರು ಅನಧಿಕೃತವಾಗಿ ಕಾರ್ಮಿಕ ಕಾರ್ಡ್ ಪಡೆದು ನೈಜ ಕಾರ್ಮಿಕರಿಗೆ ದೊಡ್ಡ ಮಟ್ಟದ ಅನ್ಯಾಯವಾಗುತ್ತಿರುವ ಕುರಿತು ಮೇಲ್ಮನೆ ಸದಸ್ಯ ಯು.ಬಿ. ವೆಂಕಟೇಶ ಅವರ ಪ್ರಶ್ನೆ ಗಂಭೀರ ಚರ್ಚೆಗೆ ವೇದಿಕೆಯಾಯಿತು.
ಕಾರ್ಮಿಕ ಸಚಿವ ಸಂತೋಷ ಲಾಡ್ ಉತ್ತರ ನೀಡಿ, ರಾಜ್ಯದಲ್ಲಿ ೩,೫೪,೧೨೮ ರಷ್ಟು ಅನರ್ಹ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ನೋಂದಣೆಯಾಗಿದೆ ಎಂಬ ವಿಚಾರ ಪ್ರಕಟಿಸಿದ್ದೂ ಅಲ್ಲದೇ ಫೆರಾರಿ ಕಾರ್, ೫೦ ಎಕರೆ ಜಮೀನು ಹೊಂದಿದವರು, ಪ್ರಾಧ್ಯಾಪಕರು ಸಹ ಕಾರ್ಮಿಕ ಕಾರ್ಡ್ ಹೊಂದಿರುವ ಗಂಭೀರವಾದ ವಿಷಯವನ್ನು ಹೇಳಿ ಸ್ವತಃ ಸಚಿವರೇ ದಿಗ್ಭ್ರಮೆ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಯು.ಬಿ. ವೆಂಕಟೇಶ ಅವರು, ಲಕ್ಷಾಂತರ ಸಂಖ್ಯೆಯಲ್ಲಿ ನಕಲಿ ಕಾರ್ಮಿಕರು ನೋಂದಣಿಯಾಗಿದ್ದಾರೆ, ಈ ರೀತಿಯಾದರೆ ನೈಜ ಕಾರ್ಮಿಕರು ಎಲ್ಲಿ ಹೋಗಬೇಕು? ಅವರಿಗೆ ದೊರಕಬೇಕಾದ ಸೌಲಭ್ಯಗಳು ನಕಲಿ ಕಾರ್ಮಿಕರ ಪಾಲಾಗುತ್ತಿವೆ, ಅಷ್ಟೇ ಅಲ್ಲದೇ ಒಟ್ಟು ೩,೩೪,೧೨೮ ಅನರ್ಹ ಕಾರ್ಮಿಕರು ಹಾವೇರಿ ಜಿಲ್ಲೆಯಲ್ಲಿಯೇ ೨,೨೩,೨೩೦ ಹಾಗೂ ಬೀದರ್‌ನಲ್ಲಿ ೩೨, ೧೮೭ ನಕಲಿ ಕಾರ್ಮಿಕರು ಕಾರ್ಡ್ ಹೊಂದಿರುವುದರ ಅರ್ಥವೇನು? ಈ ಜಿಲ್ಲೆಯಲ್ಲಿ ಅಷ್ಟೇ ಏಕೆ ಈ ರೀತಿಯಾಗಿ ಅನಧಿಕೃತವಾಗಿ ಕಾರ್ಡ್ ನೀಡಲಾಗಿದೆ, ಸರ್ಕಾರ ಗಂಭೀರವಾಗಿ ಪರಿಗಣಿಸಿ ನಕಲಿ ಕಾರ್ಡ್‌ಗಳನ್ನು ರದ್ದುಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ನಂತರ ಉತ್ತರ ನೀಡಿದ ಸಚಿವ ಲಾಡ್, ರಾಜ್ಯದಲ್ಲಿ ಒಟ್ಟು ೫೧ ಲಕ್ಷ ಕಾರ್ಮಿಕ ಕಾರ್ಡ್ಗಳನ್ನು ನೀಡಲಾಗಿದೆ, ನಕಲಿ ಕಾರ್ಡ್ ಬಗ್ಗೆಯೂ ಸಹ ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಮನೆ-ಮನೆ ಸರ್ವೇ ಮೊದಲಾದ ಪ್ರಕ್ರಿಯೆ ಕೈಗೊಂಡು ೮ ತಿಂಗಳ ಅವಧಿಯಲ್ಲಿ ನಕಲಿ ಕಾರ್ಡ್ ಪತ್ತೆ ಹಚ್ಚಿ ರದ್ದುಗೊಳಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.