ದಾವಣಗೆರೆ: ಅಸಲಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚಿಕ್ಕ ಚೀಮನಹಳ್ಳಿ ಗ್ರಾಮದ ಸಿವಿಲ್ ಗುತ್ತಿಗೆದಾರರೊಬ್ಬರಿಗೆ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ೪೦ ಲಕ್ಷ ರೂ., ವಶಕ್ಕೆ ಪಡೆದಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಚಿರಸ್ಥಹಳ್ಳಿ ಗ್ರಾಮದ ಹೆಚ್. ಈಶ್ವರಪ್ಪ ಮತ್ತು ಅದೇ ತಾಲ್ಲೂಕಿನ ಪಾವನಪುರ ಗ್ರಾಮದ ಪಿ. ಸಂದೀಪ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿವಿಲ್ ಗುತ್ತಿಗೆದಾರರಾದ ಬಿ.ಆರ್. ಗೋವರ್ಧನ್ ಅವರು ಹರಪನಹಳ್ಳಿಯಲ್ಲಿ ಸಿವಿಲ್ ಗುತ್ತಿಗೆ ಪಡೆದಾಗ ಈ ಇಬ್ಬರು ಆರೋಪಿಗಳು ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿದ್ದರು. ಇದೇ ಪರಿಚಯದಿಂದ ಗೋವರ್ಧನ್ ಅವರಿಗೆ ಮನೆಯ ಪಾಯ ತೆಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿರುವುದಾಗಿ ತಿಳಿಸಿ, ಒಂದೆರಡು ಅಸಲಿ ಚಿನ್ನದ ನಾಣ್ಯ ನೀಡಿ ವಿಶ್ವಾಸ ಬರುವಂತೆ ಮಾಡಿದ್ದಾರೆ. ೬೦ ಲಕ್ಷ ನೀಡಿದರೆ ಕೊಡುವುದಾಗಿ ತಿಳಿಸಿ, ಚನ್ನಗಿರಿಗೆ ಬರುವಂತೆ ತಿಳಿಸಿದಾಗ ಅವರ ಮಾತನ್ನು ನಂಬಿದ ಗುತ್ತಿಗೆದಾರನಿಗೆ ೪೪.೫೦ ಲಕ್ಷ ರೂ., ಅವರಿಗೆ ನೀಡಿ ನಕಲಿ ಬಂಗಾರದ ನಾಣ್ಯಗಳನ್ನು ಖರೀದಿಸಿದ್ದಾರೆ. ಮನೆಗೆ ಹೋಗಿ ಆ ನಾಣ್ಯಗಳನ್ನು ಪರೀಕ್ಷಿಸಿದಾಗ ಅವು ನಕಲಿ ನಾಣ್ಯಗಳೆಂಬ ಅಸಲಿಯತ್ತು ಬಯಲಾಗಿದೆ ಎಂದು ವಿವರಿಸಿದರು.
ಕೂಡಲೇ ಎಚ್ಚೆತ್ತುಕೊಂಡ ಗುತ್ತಿಗೆದಾರ ಆ ಆರೋಪಿಗಳ ಭಾವಚಿತ್ರದೊಂದಿಗೆ ಬಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಕೂಡಲೇ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಬಿ. ನಿರಂಜನ, ಪಿಎಸ್‌ಐ ಗುರುಶಾಂತಯ್ಯ, ಶಶಿಧರ್, ಸಂತೆಬೆನ್ನೂರು ವೃತ್ತ ಕಚೇರಿಯ ಎಂ. ರುದ್ರೇಶ್ ಹಾಗೂ ಸಿಬ್ಬಂದಿಗಳಾದ ಬೀರೇಶ್ವರ ಪುಟ್ಟಕ್ಕನವರ್, ನರೇಂದ್ರಸ್ವಾಮಿ, ಚಂದ್ರಚಾರಿ ಅವರ ತಂಡ ೧೫ ದಿನದಲ್ಲಿ ಆರೋಪಿಗಳನ್ನು ಬಂಧಿಸಿ, ನಗದನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಮುನ್ನೋಳಿ, ಇನ್ಸ್ಪೆಕ್ಟರ್ ಬಿ. ನಿರಂಜನ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.