ನಟಿ ರಾಧಿಕಾ ಅವರ ಮನೆಯ ಕೆಲಸದಾಳು ನಾಪತ್ತೆ

Advertisement


ಮಂಗಳೂರು: ಚಲನಚಿತ್ರ ನಟಿ ರಾಧಿಕಾ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲುಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (೩೩) ಕಾಣೆಯಾಗಿರುವ ಮಹಿಳೆ.
ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ವಾಸವಿರುವ ನಟಿ ರಾಧಿಕ ಅವರ ಎಸ್ಟೇಟ್‌ನಲ್ಲಿ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ನಾಗರತ್ನ ಕಾಣೆಯಾಗಿದ್ದಾಳೆ ಎಂದು ಆಕೆಯ ಪತಿ ಮಹಾದೇವ ಮಾರಿಪಟಗಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗಂಡ-ಹೆಂಡತಿ ಇಬ್ಬರು ರಾಧಿಕಾ ಅವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಅ.೧೩ ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್‌ನಲ್ಲಿ ಕೆಲಸಕ್ಕೆ ಹೋಗಿದ್ದು, ಅಂದು ಬೆಳಿಗ್ಗೆ ಅಲಗಲಿರುವ ಮನೆಗೆ ಚಾ ಕುಡಿದು ಬರುವುದಾಗಿ ಹೇಳಿ ಹೋದಾಕೆ ಮತ್ತೆ ವಾಪಾಸ್ ಬಂದಿಲ್ಲ. ತಡವಾದರೂ ಬಾರದಿದ್ದನ್ನು ನೋಡಿ ಮನೆಯತ್ತ ಹೋದಾಗ ಆಕೆ ಅಲ್ಲಿರದೆ ಕಾಣೆಯಾಗಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಕೆ ತನ್ನ ಬಟ್ಟೆಬರೆ, ಆಧಾರ್ ಕಾರ್ಡ್, ನಗದನ್ನು ಹಿಡಿದುಕೊಂಡು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಕೆ ಹಿಂದೆ ಕೂಡ ಗಂಡನ ಜೊತೆ ಮುನಿಸಿಕೊಂಡು ಧರ್ಮಸ್ಥಳ, ಮಂಗಳೂರಿನಲ್ಲಿ ತಿರುಗಾಡಿಕೊಂಡು ವಾಪಸು ಬರುತ್ತಿದ್ದಳು. ಈಗ ಕೂಡ ಹಾಗೇ ಮಾಡಿರಬೇಕೆಂದು ಭಾವಿಸಿದ್ದ ಪತಿಗೆ ಅ.೧೪ ರಂದು ಪೋನ್ ಕರೆ ಮಾಡಿ ನನ್ನನ್ನು ಹುಡುಕಬೇಡಿ ನಾನು ದೂರ ಹೋಗುತ್ತಿದ್ದೆನೆಂದು ತಿಳಿಸಿದ್ದಾಳೆ. ಇದೀಗ ಮೊಬೈಲ್ ಸ್ವಿಚ್ ಆಪ್ ಆಗಿದ್ದು, ನಾಪತ್ತೆಯಾಗಿದ್ದಾಳೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಈಕೆಯ ಮಾಹಿತಿ ಸಿಕ್ಕವರು ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.