ನನ್ನ ಕರ್ತವ್ಯವನ್ನು ನಾನು ಶಿಸ್ತಿನಿಂದ ನಿರ್ವಹಿಸಿದ್ದೇನೆ

Advertisement

ಬೆಂಗಳೂರು: ಬಿಜೆಪಿ, ಜೆಡಿಎಸ್ ಶಾಸಕರ ನಡೆ ಬೇಸರ ತರಿಸಿದೆ ಎಂದು ಸ್ಪೀಕರ್​ ಯು.ಟಿ. ಖಾದರ್ ಹೇಳಿದರು.

ವಿಧಾನಸಭೆಯ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬಿಲ್​​ಗಳನ್ನು ಪಾಸ್ ಮಾಡುವುದು ನಮ್ಮ ಮುಂದಿತ್ತು. ಆದರೆ, ಅಧಿಕ ಸಮಯ ಧರಣಿಯಲ್ಲೇ ಕಳೆದುಹೋಯಿತು ಎಂದರು.

ಸದನವನ್ನು ಗೌರವಯುತವಾಗಿ ನಡೆಸುವುದು ನನ್ನ ಕರ್ತವ್ಯ, ಇಲ್ಲಿ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಪೀಠಕ್ಕೆ ಅಗೌರವ ತೋರಿದ್ದಕ್ಕೆ ಕ್ರಮ ಕೈಗೊಂಡಿದ್ದೇವೆ. ನನ್ನ ಕರ್ತವ್ಯವನ್ನು ನಾನು ಶಿಸ್ತಿನಿಂದ ನಿರ್ವಹಿಸಿದ್ದೇನೆ ಎಂದಿದ್ದಾರೆ.

ಜು. 3ರಿಂದ 21ರವರೆಗೆ ಒಟ್ಟು 15 ದಿನಗಳ ಕಾಲ ಸುಮಾರು 78 ಗಂಟೆ 35 ನಿಮಿಷಗಳ ಮೊದಲ ಅಧಿವೇಶನದ ಕಾರ್ಯಕಲಾಪ ನಡೆಸಲಾಗಿದೆ ಎಂದ ಅವರು. ಜು. 3ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾಡಿದ ಭಾಷಣದ ವಂದನಾ ನಿರ್ಣಯದಲ್ಲಿ 31 ಸದಸ್ಯರು ಒಟ್ಟು 12 ಗಂಟೆ 39 ನಿಮಿಷಗಳ ಕಾಲ ಭಾಗವಹಿಸಿದ್ದರು. ವಂದನಾ ನಿರ್ಣಯದ ಪ್ರಸ್ತಾವವನ್ನು ಜು. 13ರಂದು ಅಂಗೀಕರಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜು. 7ರಂದು 2023-24ನ ಸಾಲಿನ ಬಜೆಟ್‌ ಮಂಡಿಸಿದರು. ಬಜೆಟ್‌ ಕುರಿತ ಸಾಮಾನ್ಯ ಚರ್ಚೆಯಲ್ಲಿ 62 ಸದಸ್ಯರು ಒಟ್ಟು 12 ಗಂಟೆ 52 ನಿಮಿಷಗಳ ಕಾಲ ಭಾಗವಹಿಸಿದ್ದರು.

ಸದನದಲ್ಲಿ ಅಶಿಸ್ತು ಹಾಗೂ ಅಗೌರವದಿಂದ ವರ್ತಿಸಿದ 10ಜನ ಸದಸ್ಯರನ್ನು ಜು. 19ರಂದು ಅಧಿವೇಶನ ಮುಕ್ತಾಯವಾಗುವವರೆಗೆ ಅಮಾನತುಗೊಳಿಸಲಾಯಿತು ಎಂದು ಖಾದರ್ ಮಾಹಿತಿ ನೀಡಿದರು.