ನನ್ನ ಜೀವಕ್ಕೆ ಅಪಾಯವಿದೆ: ನೇಹಾ ತಂದೆ ನಿರಂಜನ ಆತಂಕ

Advertisement

ಹುಬ್ಬಳ್ಳಿ: ನನಗೆ ಜೀವ ಬೆದರಿಕೆ ಇದೆ. ನಮ್ಮ ಮನೆಯ ಸುತ್ತಮುತ್ತ ಅಪರಿಚಿತರು ಓಡಾಡುತ್ತಿದ್ದಾರೆ. ನಿನ್ನೆ ರಾತ್ರಿಯೂ(ಸೋಮವಾರ ರಾತ್ರಿ) ಇಬ್ಬರು ಅಪರಿಚಿತರು ನಮ್ಮ ಮನೆ ಸುತ್ತಮುತ್ತ ಓಡಾಡಿದ್ದಾರೆ. ನನ್ನ ಜೀವಕ್ಕೇನಾದರೂ ಆದರೆ ಬೇರೆಯದ್ದೇ ಸ್ವರೂಪ ಪಡೆಯುತ್ತದೆ. ಪೊಲೀಸರು ಹೆಚ್ಚಿನ ರಕ್ಷಣೆ ನೀಡಬೇಕು ಎಂದು ನೇಹಾ ಹಿರೇಮಠ ಅವರ ತಂದೆ ಹಾಗೂ ಕಾರ್ಪೊರೇಟರ್ ನಿರಂಜನ ಹಿರೇಮಠ ಹೇಳಿದ್ದಾರೆ.
ಮಂಗಳವಾರ ಅವರ ನಿವಾಸಕ್ಕೆ ಸಿಐಡಿ ಡಿಜಿಪಿ ಡಾ.ಎಂ.ಎ ಸಲೀಂ ಅವರು ಭೇಟಿ ನೀಡಿ ಮಾಹಿತಿ ಪಡೆದು ತೆರಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಈಗಾಗಲೇ ನನ್ನ ಮೇಲೆ ಕೆಲವರು ಕಣ್ಣಿಟ್ಟಿದ್ದಾರೆ. ನನ್ನ ಮಗಳ ಹತ್ಯೆಯಾದ ಬಳಿಕ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಗನ್ ಮ್ಯಾನ್ ಕೊಟ್ಟಿದ್ದಾರೆ. ಮನೆಗೆ ಪೊಲೀಸ್ ಭದ್ರತೆ ಒದಗಿಸಿದ್ದಾರೆ. ಆದರೂ ನನ್ನ ಆತಂಕ ದೂರವಾಗಿಲ್ಲ. ಸೋಮವಾರ ಸಂಜೆ ನಾನು ನನ್ನ ಕಾರಿನಲ್ಲಿ ಆಸ್ಪತ್ರೆಗೆ ತೆರಳುವಾಗಿ ಆಟೋ ಚಾಲಕ ನಮ್ಮ ಕಾರಿನ ಮುಂದೆ ಅಡ್ಡಾದಿಡ್ಡಿ ಆಟೋ ಚಲಾಯಿಸಿ ತೊಂದರೆ ಕೊಟ್ಟ. ನಾನು ಕಾರು ನಿಲ್ಲಿಸಿದರೆ ಆತನೂ ನಮ್ಮ ಕಾರಿನ ಮುಂದೆ ನಿಲ್ಲಿಸುತ್ತಿದ್ದ. ಕೊನೆಗೆ ಸಾರ್ವಜನಿಕರು ಹಿಡಿದು ವಿಚಾರಿಸಿದಾಗ ಆತ ಪಾನಮತ್ತನಾಗಿದ್ದ. ಮತ್ತಿನೇನೆನೊ ತೆಗೆದುಕೊಂಡಿದ್ದ ಅನಿಸುತ್ತದೆ. ಈ ದಿಢೀರ್ ಘಟನೆಯಿಂದ ಆತಂಕವಾಯಿತು. ದಾರಿಯಲ್ಲಿ ಹೋಗುವಾಗ ಈ ರೀತಿ ಆದರೆ, ನನ್ನ ಜೀವಕ್ಕೆ ಅಪಾಯ ಆದರೆ ಏನು ಗತಿ? ಬೇರೆಯದ್ದೇ ಸ್ವರೂಪ ಪಡೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ತಮಗೆ ಪೊಲೀಸರು ಮತ್ತಷ್ಟು ಭದ್ರತೆ ಒದಗಿಸಬೇಕು ಎಂಬುದನ್ನು ಪರೋಕ್ಷವಾಗಿ ನಿರಂಜನ ಹೇಳಿದರು.
ಸಿಐಡಿ ಡಿಜಿಪಿಗೆ ವಿವರಣೆ
ಮಗಳನ್ನು ಕೊಲೆ ಮಾಡಿದ ಫಯಾಜ್‌ನನ್ನು ಮಾತ್ರ ಬಂಧಿಸಲಾಗಿದೆ. ಕೂಲಂಕುಷ ತನಿಖೆ ನಡೆಸಬೇಕು. ಕೊಲೆ ಆರೋಪಿಗೆ ಸಹಕರಿಸಿದವರೂ ಇದ್ದಾರೆ. ಅವರನ್ನೂ ವಿಚಾರಣೆಗೊಳಪಡಿಸಬೇಕು ಎಂದು ಸಿಐಡಿ ಡಿಜಿಪಿಗೆ ಮನವಿ ಮಾಡಿದ್ದೇನೆ ಎಂದು ನಿರಂಜನ ಹೇಳಿದರು.
ಎಫ್‌ಎಸ್‌ಎಲ್ ವರದಿ ಬಂದ ತಕ್ಷಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಸಿಐಡಿ ಡಿಜಿಪಿ ತಿಳಿಸಿದ್ದಾರೆ. ನ್ಯಾಯ ಕೊಡಿಸುವ ಭರವಸೆಯನ್ನು ಸಿಐಡಿ ಡಿಜಿಪಿ ನೀಡಿದ್ದಾರೆ ಎಂದರು.