ರಾಯಚೂರು: ನನ್ನ ರಕ್ತವೇ ಕಾಂಗ್ರೆಸ್. ಹೌದು ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ. ಉತ್ತರಾಯಣ ಪುಣ್ಯ ಕಾಲದ ಮುಂಚೆ ಬಂದು ಮಂತ್ರಾಲಯದಲ್ಲಿ ಶ್ರೀರಾಯರ ದರ್ಶನ ಪಡೆದಿದ್ದೇನೆ. ಪಥ ಬದಲಿಸುವ ಕಾಲಕ್ಕೆ ದೇವರ ದರ್ಶನ ಮಾಡುತ್ತಿದ್ದೇನೆ ಎಂದು ವಿಧಾನ
ಪರಿಷತ್ ಸದಸ್ಯ ಎಚ್. ವಿಶ್ವನಾಥ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಒಂದು ಕುಟುಂಬವಿದ್ದಂತೆ ಅದರಲ್ಲಿ ಅಣ್ಣ ತಮ್ಮ ಮುನಿಸಿಕೊಂಡು ಹೊರಹೋಗುತ್ತಾರೆ. ವಾಪಸ್ ಬರುತ್ತಾರೆ. ಸಿದ್ದರಾಮಯ್ಯ ನಾನು ಒಟ್ಟಿಗೆ ಬೆಳೆದವರು ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧಿಸಬೇಕು ಎಂಬುವುದು ಇದೆ. ಅಲ್ಲಿನ ಜನರ ಪ್ರೀತಿ, ವಿಶ್ವಾಸದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಮತದಾರರ ತೀರ್ಮಾನವೇ ಅಂತಿಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಶಕ್ತಿಯನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಯಡಿಯೂರಪ್ಪನವರು ಇಲ್ಲದ ಬಿಜೆಪಿ ಪಕ್ಷವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಸಾಹಿತ್ಯ ಕ್ಷೇತ್ರದ ಎಂಎಲ್ಸಿ, ಬಿಜೆಪಿ ಎಂಎಲ್ಸಿ ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದು ನಾಮನಿರ್ದೇಶನ ಮಾಡಿದ್ದಾರೆ ಎಂದು ವಿವರಿಸಿದರು.
ಅನೇಕ ಜನರಿಗೆ ಇದು ತಿಳಿದಿಲ್ಲ. ನಾನು ಯಾವ ಪಕ್ಷದಲ್ಲಿಲ್ಲ. ಸ್ವತಂತ್ರ ವ್ಯಕ್ತಿ. ಪ್ರತಾಪಗೌಡ ಪಾಟೀಲ್ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೂ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಎಂದು ಆಪಾದಿಸಿದರು.
ಬಾಂಬೆ ಬಾಯ್ಸ್ ಪುಸ್ತಕದಲ್ಲಿ ಏನಿದೆ ಎಂಬುವುದು ಪುಸ್ತಕ ಬಿಡುಗಡೆಯಾದ ನಂತರ ತಿಳಿಯುತ್ತದೆ. ಸ್ಯಾಂಟ್ರೊರವಿ ಯಾರು ಎಂಬುವುದು ನನಗೆ ತಿಳಿದಿಲ್ಲ. ಕುಮಾರಸ್ವಾಮಿ ಅವರು ಸುಮ್ಮನೆ ಗಾಳಿಪಟ ಬಿಟ್ಟಿದ್ದಾರೆ. ಅವರಿಗೆ ಅವನು ಚೆನ್ನಾಗಿ ತಿಳಿದಿದೆ ಎಂದರು.
ಕುಮಾರಸ್ವಾಮಿ ರಾಜಕೀಯಕ್ಕೂ ಪೂರ್ವ ಸಿನಿಮಾ ಕ್ಷೇತ್ರದಲ್ಲಿದ್ದವರು. ಎರಡು ಬಾರಿ ಸಿಎಂ ಆದವರು. ಅನುಭವಿಗಳು ಹಾರಿಕೆ ವಿಚಾರಗಳನ್ನು ಬಿಡುವುದು ಶೋಭೆ ತರುವುದಿಲ್ಲ. ಪ್ರತ್ಯಕ್ಷದರ್ಶಿಗಳಂತೆ ಹೇಳುವುದು ಸರಿಯಲ್ಲ ಸಾಕ್ಷಿಗಳಿದ್ದರೆ, ತೋರಿಸಲಿ ಎಂದು ತಾಕೀತು ಮಾಡಿದರು.