ನಮ್ಮೂರ ಮಹಾತ್ಮೆ: ಮಹಿಷನೂರು ಮೈಸೂರಾಗಿದೆ

Advertisement

ಮೈಸೂರು ಹಲವಾರು ಅರಮನೆಗಳನ್ನು ಹೊಂದಿರುವ ಸುಂದರ ನಗರ. ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ೪೦೦ ವರ್ಷಗಳ ದೊಡ್ಡ ಇತಿಹಾಸವಿರುವ ಮತ್ತು ಶ್ರೀಮಂತ ಸಂಸ್ಕೃತಿ ಬಿಂಬಿಸುವ ನಾಡಹಬ್ಬ ದಸರಾ ಇಲ್ಲಿನ ಪ್ರಮುಖ ಆಚರಣೆ. ದೇಶದಲ್ಲಿಯೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಯನ್ನು ಎರಡು ಬಾರಿ ಮೈಸೂರು ತನ್ನದಾಗಿಸಿಕೊಂಡಿತ್ತು. ಇಲ್ಲಿ ಆರು ವಿಶ್ವವಿದ್ಯಾಲಯಗಳಿವೆ. ಹೀಗಾಗಿ ಇದು ಪ್ರಾಜ್ಞರು, ಜ್ಞಾನಿಗಳ ನಗರವೂ ಹೌದು.

ಬಾಲಕೃಷ್ಣ ಮದ್ದೂರು
ಮೈಸೂರು ಎಂದ ಕೂಡಲೇ ಕಣ್ಣೆದುರು ನಿಲ್ಲುವುದು ಇಲ್ಲಿನ ಉನ್ನತ ಪರಂಪರೆ. ಐತಿಹಾಸಿಕವಾಗಿ
ಮಹತ್ವ ಹೊಂದಿರುವ ಈ ಸ್ಥಳದ ಹೆಸರಿಗೆ ಪುರಾಣದ ಹಿನ್ನೆಲೆ ಇದೆ.
ದಕ್ಷಿಣ ಭಾಗದಲ್ಲಿ ಹರಡಿಕೊಂಡಿರುವ ಈ ಸುವಿಶಾಲ ಕನ್ನಡ ಪ್ರದೇಶವನ್ನು ಐವತ್ತು ವರ್ಷಗಳ ಹಿಂದೆ ಮೈಸೂರು ರಾಜ್ಯವೆಂದು ಕರೆಯಲಾಗುತ್ತಿತ್ತು. ಬಳಿಕವಷ್ಟೇ ಇದು ಕರ್ನಾಟಕವೆಂದು ಅಧಿಕೃತವಾಗಿ ಹೆಸರಿಸಲ್ಪಟ್ಟಿದೆ. ಪುರಾಣಗಳ ಪ್ರಕಾರ ಮೈಸೂರಿಗೆ ಈಗಿನ ಈ ಹೆಸರು ಬರಲು ಕಾರಣ-ಮಹಿಷಾಸುರನೆಂಬ ಅಸುರರ ಅರಸು. ಮಹಿಷ ಎಂದರೆ ಕೋಣ. ಕೋಣನ ತಲೆ ಹೊಂದಿದ್ದ ಈತನನ್ನು ಚಾಮುಂಡೇಶ್ವರಿ ಸಂಹರಿಸಿದಳು ಎನ್ನುವುದು ಐತಿಹ್ಯ. ಹೀಗಾಗಿ ಚಾಮುಂಡೇಶ್ವರಿ ಇಲ್ಲಿನ ಊರ ದೇವತೆ.
ಮಹಿಷಪುರ, ಮಹಿಷನೂರು ಎಂಬ ಪದಗಳು ಜನರ ಆಡುಮಾತಲ್ಲಿ ಕ್ರಮೇಣ ಮಹಿಷೂರಾಗಿ ಈಗಿನ ಮೈಸೂರು ರೂಪುಗೊಂಡಿದೆ ಎಂದು ಗುರುತಿಸಲಾಗುತ್ತದೆ. ಮೈಸೂರು ಸೀಮೆಯಲ್ಲಿ ಎಮ್ಮೆಗಳು ಹೆಚ್ಚಿದ್ದವಂತೆ. ಎಮ್ಮೆಗಳನ್ನು ಸಂಸ್ಕೃತದಲ್ಲಿ ಮಹಿಷ ಎಂದು ಗುರುತಿಸಲಾಗುವುದರಿಂದ ಈ ಹೆಸರು ರೂಢಿಗೆ ಬಂದಿದೆ. ಇಲ್ಲಿನ ಕಪ್ಪುಮಣ್ಣು ಮತ್ತು ವಾತಾವರಣ ಅತ್ಯಂತ ಸಮೃದ್ಧವಾಗಿತ್ತು. ಎರಮೈನಾಡು ಎಂದೂ ಕರೆಯಲ್ಪಡುವ ಈ ಪ್ರದೇಶ ಅತ್ಯಂತ ಸಂಪದ್ಭರಿತವಾದುದಾಗಿತ್ತು ಎನ್ನುವ ಅನೇಕ ಶಾಸನೋಲ್ಲೇಖಗಳಿವೆ. ನವ ಮೈಸೂರಿನ ಶಿಲ್ಪಿಗಳಾಗಿರುವ ಒಡೆಯರ್ ರಾಜವಂಶಸ್ಥರು, ಮೈಸೂರು ರಾಜ್ಯವನ್ನು ಮಾದರಿಯನ್ನಾಗಿ ರೂಪಿಸಿದರು. ಇವರು ಜನಸ್ನೇಹಿ ಆಡಳಿತಗಾರರು. ಏಷ್ಯಾದ ಮೊದಲ ಜಲವಿದ್ಯುತ್ ಸ್ಥಾವರ, ಮೊದಲ ವಿಶ್ವವಿದ್ಯಾಲಯ, ಮೊದಲ ಕಾರ್ಖಾನೆ, ಮೊದಲ ಬ್ಯಾಂಕ್, ಮೊದಲ ಅಣೆಕಟ್ಟೆ ಹೀಗೆ ಅಭಿವೃದ್ಧಿಯ ಪರ್ವ ಶುರುವಾಗಿದ್ದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದಲ್ಲಿ.
ಮೈಸೂರಿಗೆ ನಾಲ್ವಡಿಯವರ ಕೊಡುಗೆ ಬಹಳ. ಇವರಿಲ್ಲದ ಮೈಸೂರನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಸಲಹೆ ಮತ್ತು ಉಸ್ತುವಾರಿಯಲ್ಲಿ ನಾಲ್ವಡಿಯವರು ಮೈಸೂರಿನ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು.

ನೀವೂ ಬರೆಯಬಹುದು. ಲೇಖನಗಳನ್ನು email id -sknammuru@gmail.com ಗೆ ಕಳಿಸಿ.

ನಾಳೆ: ದಾವಣಗೆರೆಯ ರಾಂಪುರ