ನಮ್ಮ ದೇಶದ ಬಗ್ಗೆ ಅಭಿಮಾನ ನಮ್ಮಲ್ಲಿ ಸದಾ ಜೀವಂತವಾಗಿರಬೇಕು – ಸಿಎಂ ಬೊಮ್ಮಾಯಿ

Advertisement

ಬೆಂಗಳೂರು: ನಮ್ಮ ದೇಶ ನಡೆದು ಬಂದ ದಾರಿ ಹಾಗೂ ನಾವು ಮುಂದೆ ಸಾಗಬೇಕಾದ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾವೆಲ್ಲ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು, ನಮಗೆ ಸ್ವಾತಂತ್ರ್ಯ ದ ಮಹತ್ವ ಎಷ್ಟು ಇದೆಯೊ ಗೊತ್ರಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದವರಿಗೆ ಅದರ ಗಾಂಭಿರ್ಯತೆ ಗೊತ್ತಿತ್ತು. ನಮ್ಮ ದೇಶದ ಇತಿಹಾಸ, ಪರಂಪರೆ ತಿಳಿದುಕೊಂಡಾಗ ನಾವು ಯಾರು ಎಂದು ತಿಳಿಯುತ್ತದೆ. ಈ ದೇಶಕ್ಕಾಗಿ ಹಾಗೂ ಸ್ವಂತಕ್ಕಾಗಿ ನಾನು ಏನು ಮಾಡಬಲ್ಲೆ ಎನ್ನುವುದನ್ನು ತಿಳಿಯಬೇಕಿದೆ. ಯಾಕೆಂದರೆ ಪ್ರತಿಯೊಬ್ಬರ ಸ್ವಂತ ಸಾಧನೆ ದೇಶದ ಸಾಧನೆಗೆ ಜೋಡಣೆ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಸದಾ ಕಾಲ ನಮ್ಮಲ್ಲಿ ಅಭಿಮಾನ ಇರಬೇಕು
ಕಾರ್ಯಕ್ರಮದಲ್ಲಿ ನಾವು ದೇಶಭಕ್ತಿ ಹಾಡನ್ನು ಕೇಳಿದೆವು. ಅದನ್ನು ಕೇಳಿದಾಗಲೆಲ್ಲಾ ನಮ್ಮಲ್ಲಿ ದೇಶದ ಬಗ್ಗೆ ಅಭಿಮಾನ ಉಕ್ಕುತ್ತದೆ. ಅದು ಸದಾಕಾಲ ನಮ್ಮಲ್ಲಿ ಜೀವಂತವಾಗಿರಬೇಕು. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವು ತಿಳಿದುಕೊಂಡು ದೇಶ ಕಟ್ಟುವುದರಲ್ಲಿ ನಮ್ಮ ಪಾಲು ಇರಬೇಕು. ನಾವು ದೇಶಕ್ಕಾಗಿ ಪ್ರಾಣ ಕೊಡುವ ಅಗತ್ಯವಿಲ್ಲ. ದೇಶಕ್ಕಾಗಿ ಬದುಕಬೇಕಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಈಗ ನಮ್ಮ ದೇಶ ಅಮೃತಕಾಲದಲ್ಲಿದೆ
ನಮ್ಮ ಪ್ರಧಾನಿಗಳು ದೇಶದ ಮುಂದಿನ 25 ವರ್ಷವನ್ನು ಅಮೃತ ಕಾಲ ಅಂತ ಕರೆದಿದ್ದಾರೆ‌. ಇಡೀ ವಿಶ್ವದಲ್ಲಿ ಭಾರತಕ್ಕೆ ಮಹತ್ವದ ಕಾಲ ಬಂದಿದೆ. ನಾವು ಎಲ್ಲ ಕ್ಷೇತ್ರದಲ್ಲೂ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ದೇಶಕ್ಕೆ ನಮ್ಮ ಕೊಡುಗೆ ಏನು ಎನ್ನುವ ಚಿಂತನೆ ಮಾಡೋಣ. ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜನರನ್ನು ಒಟ್ಟುಗೂಡಿಸಿ ವರ್ಷವಿಡೀ ಒಳ್ಳೆಯ ಕಾರ್ಯಗಳನ್ನು ಮಾಡಿದೆ. ಅವರಿಗೆ ಅಭಿನಂದನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.