ನವಭಾರತದ ಅಧಿನಾಯಕತ್ವಕ್ಕೆ ಜನಾದೇಶದ ಹೊಣೆಗಾರಿಕೆ

Advertisement

ಸದಾಶಯ ಹಾಗೂ ಸದಾಗ್ರಹಗಳ ರೂಪುರೇಷೆಯ ಮೂಲಕ ನವಭಾರತದ ಪರಿಕಲ್ಪನೆಯ ಕಾರ್ಯಸೂಚಿಯ ಜಾರಿ ಪ್ರಕ್ರಿಯೆಗೆ ಐದು ವರ್ಷಗಳ ಅವಧಿಯ ಜನಾದೇಶವನ್ನು ಮತದಾನದವೆಂಬ ರಜತ ಪಾತ್ರೆಯಲ್ಲಿ ಧಾರೆ ಎರೆದುಕೊಡುವ ಪವಿತ್ರ ಕಾಯಕದ ಘೋಷಣೆಯ ಸಂದರ್ಭದಲ್ಲಿ ದೇಶವಾಸಿಗಳ ಕನಸುಗಳ ರಾಶಿ ಹಿಮಾಲಯ ಪರ್ವತ ಶ್ರೇಣಿಯ ಎತ್ತರವನ್ನು ಮೀರಿಸುವಂಥದ್ದು. ಏಕೆಂದರೆ, ಜಾಗತಿಕ ಗ್ರಾಮದ ಪರಿಕಲ್ಪನೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಜನರಿಗೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ದೇಶವನ್ನು ಮರು ನಿರ್ಮಾಣ ಮಾಡಬೇಕೆಂಬ ಹೆಬ್ಬಯಕೆ. ೧೫ನೆ ಲೋಕಸಭಾ ಚುನಾವಣೆಯ ಏಳು ಸುತ್ತಿನ ಮತದಾನದ ಪ್ರಕ್ರಿಯೆ ಮುಗಿದು ನಾಳೆ ಮಂಗಳವಾರ ಮತ ಎಣಿಕೆ ಮುಗಿದು ಜನಾದೇಶವೆಂಬುದು ಯಾವ ಪಕ್ಷಕ್ಕೆ ಪ್ರಾಪ್ತವಾಗುತ್ತದೆ ಎಂಬ ಮಹತ್ವದ ಘೋಷಣೆ ಮುಗಿಯುತ್ತಿದ್ದಂತೆಯೇ ಜನಾದೇಶದ ಪುಷ್ಪ ಮಾಲೆಯನ್ನು ಧರಿಸುವ ನಾಯಕತ್ವದ ಹೆಸರೂ ಕೂಡಾ ಘೋಷಣೆಯಾಗುವುದು ಖಂಡಿತ. ಇಂತಹ ಸಂದರ್ಭದಲ್ಲಿ ಭಾರತೀಯರೆಲ್ಲರ ಒಕ್ಕೊರಲ ಹಕ್ಕೊತ್ತಾಯವೆಂದರೆ ಭಿನ್ನಮತಗಳು ಬೆಟ್ಟದಷ್ಟಿರಲಿ, ಹತಾಶೆಗಳು ಅರಬ್ಬಿ ಸಮುದ್ರವನ್ನು ದಾಟಿ ಹೋಗಲಿ ಆದರೆ, ಸರ್ವರಿಗೂ ಸಮಬಾಳು ಹಾಗೂ ಸಮಪಾಲನ್ನು ಒದಗಿಸುವ ನೀತಿ ನಿಲುವುಗಳು ಹೊಸ ಸರ್ಕಾರದ ಮೂಲಕ ಜಾರಿಗೆ ಬರಲಿ ಎಂಬುದಾಗಿದೆ. ಪ್ರಣಾಳಿಕೆಯನ್ನು ಮೀರಿ ಭಾರತೀಯರ ಈ ಹಕ್ಕೊತ್ತಾಯ ಗೋಡೆ ಬರಹದಂತೆ ದೇಶದಲ್ಲಿ ಎದ್ದು ಕಾಣುತ್ತಿರುವ ಸಂದರ್ಭದಲ್ಲಿ ಹೊಸ ಸರ್ಕಾರ ತನ್ನ ವೈಚಾರಿಕ ಬದ್ಧತೆಯ ಜೊತೆಗೆ ಆಚಾರವಂತಿಕೆಯ ನೀತಿ ನಿಲುವುಗಳನ್ನು ಜನತೆಯ ಅಪೇಕ್ಷೆಗೆ ತಕ್ಕಂತೆ ಬದಲಾಯಿಸಿಕೊಳ್ಳುವುದು ಈಗಿನ ಅಗತ್ಯ.
ನಿಜ. ಬದಲಾವಣೆ ಜಗದ ನಿಯಮ. ಆದರೆ, ನಿರಂತರ ಬದಲಾವಣೆ ಎಂಬುದು ಪ್ರಗತಿಗೆ ಮಾರಕ. ಪ್ರಗತಿಯ ಸಾತತ್ಯದಲ್ಲಿ ಬದಲಾವಣೆಯ ಸಾಂಗತ್ಯವಿದ್ದಾಗ ಮಾತ್ರ ಆಡಳಿತದಲ್ಲಿ ಖಚಿತತೆ ಹಾಗೂ ದಿಕ್ಕುದೆಸೆ ಮೂಡಲು ಸಾಧ್ಯ. ಜನತಂತ್ರ ವ್ಯವಸ್ಥೆ ಎಂಬುದು ಬೇಡಿದ್ದನ್ನು ಕೊಡುವ ಕಾಮಧೇನು ಆಗಬಾರದು. ಬೇಡಿದ್ದನ್ನು ಸಾಮೂಹಿಕ ನೆಲೆಯಲ್ಲಿ ಚಿಂತಿಸಿ ಅದರ ಕಾರ್ಯಸಾಧ್ಯತೆ ಹಾಗೂ ವಾಸ್ತವಿಕ ಬದ್ಧತೆಯನ್ನು ಗಮನಿಸಿ ನಿರ್ಧಾರಕ್ಕೆ ಬರುವುದೇ ಜನತಂತ್ರದ ರಾಜಮಾರ್ಗ. ಹಾಗಿಲ್ಲವಾದರೆ, ಸಂಘಟನೆಯ ಹೆಸರಿನಲ್ಲಿ ಸರ್ಕಾರದ ಆಡಳಿತವನ್ನು ಬಗ್ಗಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಪಟ್ಟಭದ್ರರು ಮತ್ತಷ್ಟು ಭದ್ರವಾಗಿ ಬೇರೂರಲು ಅವಕಾಶ ಕೊಟ್ಟಂತಾಗುತ್ತದೆ. ನೊಂದವರು-ಬೆಂದವರು ಸರ್ಕಾರದ ಆದ್ಯತೆಗಳಾಗಿ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳಾಗುವುದು ಪ್ರಶ್ನಾತೀತ. ಜನತಂತ್ರದಲ್ಲಿ ಸಂಖ್ಯೆಗಳು ಮುಖ್ಯವೇ. ಆದರೆ, ಮನಸ್ಸುಗಳು ಯಾವತ್ತಿಗೂ ಮುಖ್ಯವೇ. ಸರ್ಕಾರದ ರಚನೆ ಹಾಗೂ ಬಹುಮತ ಇತ್ಯರ್ಥಕ್ಕೆ ಸಂಖ್ಯೆ ನಿರ್ಣಾಯಕ. ಉಳಿದಂತೆ ಮತ ಕೊಡದವರೂ ಕೂಡಾ ಸರ್ಕಾರದ ಫಲಾನುಭವಿಗಳಾಗುವಂತೆ ನೋಡಿಕೊಳ್ಳುವುದು ಆಡಳಿತಗಾರರ ಬುದ್ಧಿಪೂರ್ವಕ ನಡೆಯಾದರಷ್ಟೆ ಜನತಂತ್ರಕ್ಕೆ ಸೊಗಸು.
ಮತದಾನೋತ್ತರ ಸಮೀಕ್ಷೆಗಳನ್ನು ಆಧರಿಸಿ ಹೇಳುವುದಾದರೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಜನಾದೇಶದ ಪ್ರಾಪ್ತಿಯಾಗುವ ಅವಕಾಶಗಳು ಹೆಚ್ಚಿವೆ. ಹಾಗಾದಾಗ ಸ್ವಾಭಾವಿಕವಾಗಿಯೇ ನರೇಂದ್ರ ಮೋದಿ ಅವರು ಮೂರನೆಯ ಅವಧಿಗೆ ಪ್ರಧಾನಿಯಾಗುವುದು ಸ್ಪಷ್ಟ. ಇನ್ನು ಕೆಲವು ಸಮೀಕ್ಷೆಗಳು ಪ್ರಕಾರ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಹಾಗಾದಾಗ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಪ್ರಧಾನಿ ಸ್ಥಾನದ ಪ್ರಮುಖ ಅಭ್ಯರ್ಥಿ. ಆದರೆ, ಅಧಿಕಾರದ ಸುತ್ತ ಗಿರಕಿ ಹೊಡೆಯುವ ರಾಜಕಾರಣದಲ್ಲಿ ಏನನ್ನೂ ಹೇಳುವುದು ಕಷ್ಟ. ಇದಕ್ಕೆ ಸಮಾನಾಂತರವಾಗಿ ಸಮೀಕ್ಷೆಗಳ ಭವಿಷ್ಯವನ್ನು ಒಪ್ಪಲು ಕಾಂಗ್ರೆಸ್ ಮುಖಂಡರು ಸಿದ್ಧರಿಲ್ಲ. ಅವರ ದೃಷ್ಟಿಯಲ್ಲಿ ಇದೆಲ್ಲಾ ಮೋದಿ ಪ್ರಣೀತ ಸಮೀಕ್ಷೆ. ಹಾಗೆ ನೋಡಿದರೆ, ಸಮೀಕ್ಷೆ ಎಂಬುದು ಸಮೀಕ್ಷೆ ಅಷ್ಟೆ. ಇದೊಂದು ರೀತಿಯ ಕೈಮರ. ಮತದಾರರ ಒಲವು ಯಾವ ಕಡೆ ಹರಿದಿದೆ ಎಂಬುದರ ಸುಳಿವು ಸಮೀಕ್ಷೆಯಿಂದ ತಿಳಿಯಬಹುದು. ಹಲವಾರು ಸಂದರ್ಭಗಳಲ್ಲಿ ಸುಳಿವುಗಳು ಸುಳ್ಳಾಗಬಹುದು-ಹಿಂದೆ ಸುಳ್ಳಾಗಿವೆ ಕೂಡಾ. ಏನೇ ಆದರೂ ಚುನಾವಣಾ ಪ್ರಕ್ರಿಯೆ ಇನ್ನು ಒಂದು ಅಧ್ಯಯನ ಶಾಸ್ತçವಾಗಿ ಜಗತ್ತಿನಲ್ಲಿ ಬೆಳೆದಿಲ್ಲ. ಹೀಗಾಗಿ ಟೀಕೆ ಟಿಪ್ಪಣಿಗಳು ಸಹಜವೇ.
ಅದೇನೇ ಇರಲಿ ಮಂಗಳವಾರ ಸಂಜೆಯ ವೇಳೆಗೆ ನವಭಾರತ ನಿರ್ಮಾಣದ ಕನಸನ್ನು ಸಾಕ್ಷಾತ್ಕರಿಸುವ ನಾಯಕ ಯಾರಾಗುತ್ತಾರೆ ಎಂಬ ವಿಚಾರ ಸ್ಪಷ್ಟವಾಗುವುದಂತೂ ಖಂಡಿತ. ಪ್ರಣಾಳಿಕೆಗಳು ಗ್ಯಾರಂಟಿಗಳಿಂದ ತುಂಬಿಹೋಗಿರುವ ಸಂದರ್ಭದಲ್ಲಿ ಚುನಾವಣೆಯ ಫಲಿತಾಂಶದ ದಿಕ್ಕುದೆಸೆಯನ್ನು ಗುರುತಿಸುವುದು ಕಷ್ಟವೇ. ಪರ ಹಾಗೂ ವಿರೋಧ ಎಂಬುದು ಒಂದೇ ನಾಣ್ಯದ ಎರಡು ಮುಖಗಳು. ಹಲವು ಕಾರಣಗಳಿಗಾಗಿ ಪರ ಹಾಗೂ ವಿರೋಧದ ಭಾವನೆಗಳು ಮತದಾರರಲ್ಲಿ ಮೂಡಿದ್ದರೂ ಅವುಗಳ ಗುರಿ ಮಾತ್ರ ಹತಾಶೆಯಿಂದ ಸಮಾಜ ಮುಕ್ತವಾಗಿ ಸರ್ವಾಂಗೀಣ ಪ್ರಗತಿಯತ್ತ ಒಯ್ಯುವ ಸರ್ಕಾರ ರಚನೆಯಾಗಬೇಕು ಎಂಬುದಷ್ಟೆ.