`ನವ ಮಾಧ್ಯಮ’- ಬಾಧಕವೇ ಹೆಚ್ಚು
ಡಿಜಿಟಲ್ ಮಾಧ್ಯಮಕ್ಕೆ ನಿಯಂತ್ರಣ ಹೇರಿ, ತಿರಸ್ಕರಿಸಿ

Advertisement

ಹಾವೇರಿ(ಕನಕ-ಶರೀಫ-ಸರ್ವಜ್ಞ ವೇದಿಕೆ): ಸಮಾಜದ ಆರೋಗ್ಯಕ್ಕೆ ಮಾರಕವಾಗಿರುವ ನವ ಮಾಧ್ಯಮ'ಗಳ (ಡಿಜಿಟಲ್ ವೇದಿಕೆಗಳು) ನಿಯಂತ್ರಣಕ್ಕೆ ಕಾನೂನುಬದ್ಧ ನಿಬಂಧನೆ ಸೂಕ್ತ ಎಂದುಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಮೋಹನ ಹೆಗಡೆ ಅಭಿಪ್ರಾಯಪಟ್ಟರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ, ಮಾಧ್ಯಮ- ಹೊಸತನ ಮತ್ತು ಆವಿಷ್ಕಾರ' ಗೋಷ್ಠಿಯ ಆಶಯ ಭಾಷಣ ಮಾಡಿದ ಅವರು,ಯುವ ಪೀಳಿಗೆಯನ್ನು ಆಕರ್ಷಿಸಿರುವ ನವ ಮಾಧ್ಯಮ ಪ್ರಕಾರ ವಿಶ್ವಾಸಾರ್ಹತೆಯನ್ನು ಬೆಳೆಸಿಕೊಂಡಿಲ್ಲ’ ಎಂದು ವಿಷಾದಿಸಿದರು.
ಮುದ್ರಣ ಮಾಧ್ಯಮದಲ್ಲಿ ಸತ್ಯ ಪ್ರಕಟವಾಗುವುದರ ಒಳಗಾಗಿ, ಸುಳ್ಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಈ ಮಾಧ್ಯಮದಿಂದ ಆಗಿರುವ ಅತೀ ದೊಡ್ಡ ನಕಾರಾತ್ಮಕ ಬೆಳವಣಿಗೆ. ಎಲ್ಲ ಮಾಧ್ಯಮಗಳಿಗೂ ಸ್ವಯಂ ನಿಯಂತ್ರಣ ಬೇಕು; ಹಾಗೆಯೇ ಇದಕ್ಕೂ ಕೂಡ. ಆದರೆ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುವ ಹಾಗೂ ಪ್ರತಿಯೊಬ್ಬನೂ ಪತ್ರಕರ್ತನೇ ಆಗಿರುವ ಈ ಸಂದರ್ಭದಲ್ಲಿ ಸ್ವಯಂ ನಿಯಂತ್ರಣವನ್ನು ಹಾಕಿಕೊಳ್ಳುವರು ಯಾರು? ಆದ್ದರಿಂದ ಕಾನೂನು ಬದ್ಧ ನಿಬಂಧನೆಯ ಕುರಿತು ಆಲೋಚನೆ ನಡೆಯಬೇಕು ಎನ್ನುವುದು ಅವರ ಮಾತಿನ ಸಾರಾಂಶವಾಗಿತ್ತು.
ತಮ್ಮ ಅನಿಸಿಕೆಗೆ ಪೂರಕವಾಗಿ ದಿವಂಗತ ಎಚ್.ಎಸ್.ದೊರೆಸ್ವಾಮಿ ಮತ್ತಿತರ ಚಿಂತಕರು ೨೦೧೭ರಷ್ಟು ಹಿಂದೆಯೇ ನವ ಮಾಧ್ಯಮಗಳ ಕುರಿತು ವ್ಯಕ್ತಪಡಿಸಿದ್ದ ಕಳವಳವನ್ನು ಅವರು ಉದಾಹರಿಸಿದರು.
ಸಾಮಾಜಿಕ ಜಾಲತಾಣಗಳು ಗಾಬರಿ ಹುಟ್ಟಿಸುತ್ತಿವೆ. ಇದನ್ನು ಜನಸಾಮಾನ್ಯರ ಸಬಲೀಕರಣ ಎಂಬುದಾಗಿ ಕೆಲವು ಮಾಧ್ಯಮ ತಜ್ಞರು ಹೇಳುತ್ತಿರುವುದು ಇನ್ನಷ್ಟು ಆತಂಕಕಾರಿ ಸಂಗತಿಯಾಗಿದೆ. ಇವುಗಳ ಗೂಂಡಾಗಿರಿಗೆ ತಡೆ ಹಾಕುವುದಕ್ಕೆ ಗಂಭೀರ ಚಿಂತನೆ ನಡೆಯಲಿ' ಎಂಬುದಾಗಿ ದೊರೆಸ್ವಾಮಿ ಹೇಳಿದ್ದನ್ನು ಮೋಹನ ಹೆಗಡೆ ಉಲ್ಲೇಖಿಸಿದರು. ನ್ಯಾಯಮೂರ್ತಿ ದೀಪಕ್ ಗುಪ್ತಾ ಡಿಜಿಟಲ್ ಮಾಧ್ಯಮದ ನಿಯಂತ್ರಣಕ್ಕೆ ಕಾನೂನು ಮಾಡುವುದರ ಪರವಾಗಿ ಅಭಿಪ್ರಾಯಪಟ್ಟಿದ್ದಾರೆ; ಅನುಷ್ಟಾನ ಕಷ್ಟ ಎಂದಿದ್ದಾರೆ. ಎರಡೂ ಸತ್ಯವೇ. ಆದಾಗ್ಯೂ ರಚನಾತ್ಮಕ ಸಮಾಜದ ದೃಷ್ಟಿಯಿಂದ ಶಾಸನ ಸೂಕ್ತ. ಜೊತೆಗೆ ಸಮ್ಮೇಳನದಂತಹ ವೇದಿಕೆಗಳು ಡಿಜಿಟಲ್ ಅವಾಂತರಗಳ ವಿರುದ್ಧ ಜನಾಭಿಪ್ರಾಯ ರೂಪಿಸಿ ಸಮಾಜದ ಆರೋಗ್ಯ ಕಾಪಾಡುವ ಕುರಿತು ವ್ಯಾಪಕ ಚಿಂತನೆ ನಡೆಸಬೇಕಾದುದು ಇಂದಿನ ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಜನತೆ ಇವನ್ನು ತಿರಸ್ಕರಿಸಬೇಕು ಎಂದರು. ಮುದ್ರಣ ಕಾಗದದ ಮೇಲೆ ಸುಂಕ, ಜಿಎಸ್‌ಟಿ ಹೇರುವ ಪತ್ರಿಕೆಗಳ ಸಂಕಷ್ಟ ಹೆಚ್ಚಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಹೆಗಡೆ ಅವರ ಮಾತನ್ನು ಅನುಮೋದಿಸಿದ ಡಾ.ಸಿಬಂತಿ ಪದ್ಮನಾಭಡಿಜಿಟಲ್ ಮಾಧ್ಯಮ ಸವಾಲುಗಳ’ ಕುರಿತು ವಿಷಯ ಮಂಡನೆ ಮಾಡಿದರು. `ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡು, ಉಳಿಸಿಕೊಳ್ಳದೇ ಇದ್ದರೆ ಡಿಜಿಟಲ್ ಮಾಧ್ಯಮಕ್ಕೆ ಸಾವು ಖಚಿತ’ ಎಂದು ನುಡಿದರು. ಇವುಗಳ ನಿಯಂತ್ರಣಕ್ಕೆ ನಿಬಂಧನೆ ಸೂಕ್ತ ಎನ್ನುವುದನ್ನೂ ಒಪ್ಪಿದರು. ಮುದ್ರಣ ಮಾಧ್ಯಮದಲ್ಲಿ ಕನ್ನಡ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಕುರಿತು ಕ್ರಮವಾಗಿ ಸುದರ್ಶನ ಚನ್ನಂಗಿಹಳ್ಳಿ ಮತ್ತು ಎಚ್.ಎನ್.ಸುದರ್ಶನ ಮಾತನಾಡಿದರು. ಪ್ರೊ.ಬಿ.ಕೆ.ರವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ವೇದಿಕೆಯ ದಿನದ ಪ್ರಮುಖ ಗೋಷ್ಠಿ ಇದಾಗಿತ್ತು. ನವ ಮಾಧ್ಯಮಗಳ ಅವಾಂತರಕ್ಕೆ ಗೋಷ್ಠಿಯಲ್ಲಿ ವ್ಯಾಪಕ ಕಳವಳ ವ್ಯಕ್ತವಾಯಿತು.

ಬೆಳವಣಿಗೆ ನಿರಂತರ
ದೃಶ್ಯ ಮಾಧ್ಯಮದಿಂದ ಎಷ್ಟೇ ಪೈಪೋಟಿ ಎದುರಾದರೂ, ಇದನ್ನು ಹಿಮ್ಮೆಟ್ಟಿಸಿ, ಕನ್ನಡ ಪತ್ರಿಕೆಗಳು ೨೦೧೯ನೇ ಇಸವಿಯವರೆಗೆ ಶೇಕಡಾ ೪.೮೭ರಷ್ಟು ಬೆಳವಣಿಗೆಯನ್ನು ದಶಕದ ಅವಧಿಯಲ್ಲಿ ದಾಖಲಿಸಿದ್ದವು. ಅಲ್ಲದೇ ಕನ್ನಡ ಪತ್ರಿಕೆಗಳ ಪ್ರಸರಣ ಸಂಖ್ಯೆಯು ೨೦೧೮ರ ಕೊನೆಯವರೆಗೆ, ಇಂಗ್ಲಿಷ್ ಪತ್ರಿಕೆಗಳಿಗಿಂತ ಶೇಕಡಾ ೬.೬೦ರಷ್ಟು ಹೆಚ್ಚಾಗಿತ್ತು. ನವ ಮಾಧ್ಯಮ ಈ ಬೆಳವಣಿಗೆಗೆ ಅಡ್ಡಪಡಿಸುವ ವಿಫಲ ಯತ್ನ ನಡೆಸಿದೆ ಎಂದರು.

ಸುದ್ದಿ ಎಂದರೆ ಸಂಯುಕ್ತ ಕರ್ನಾಟಕ
ತಂತ್ರಜ್ಞಾನದ ಹೊಸತನ ಮತ್ತು ಆವಿಷ್ಕಾರಗಳ ನಡುವೆಯೂ ಮುದ್ರಣ ಮಾಧ್ಯಮ ತನ್ನ ವಿಶ್ವಾಸಾರ್ಹತೆಯನ್ನು ಕಾದುಕೊಂಡಿದೆ ಎಂದ ಬಿ.ಕೆ.ರವಿ, `ಉತ್ತರ ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟವಾದರಷ್ಟೇ ಸುದ್ದಿ ಎನ್ನುವ ಮೂಲಕ ತಮ್ಮ ಅನಿಸಿಕೆಗೆ ಇಂಬು ನೀಡಿದರು.
ಮುದ್ರಣ ಮಾಧ್ಯಮಕ್ಕೆ ಇನ್ನೂ ಕನಿಷ್ಟ ಮೂರು ದಶಕಗಳ ಭವಿಷ್ಯವಿದೆ. ಹೊಸತನ ಮತ್ತು ತಂತ್ರಜ್ಞಾನವನ್ನು ಒಪ್ಪಿಕೊಂಡೇ ಮಾಧ್ಯಮ ಮುನ್ನಡೆಯಬೇಕಾಗಿದ್ದು, ಇವುಗಳ ಒತ್ತಡದಲ್ಲಿ ಸಾಮಾಜಿಕ ಹೊಣೆಯನ್ನು ಮರೆಯಬಾರದು ಎಂದು ಕಳಕಳಿ ವ್ಯಕ್ತಪಡಿಸಿದರು.