ನಾಯಿಗಳನ್ನು ಅಟ್ಟಾಡಿಸಿ ಹೊಡೆದು ಬಾಲಕನನ್ನು ಸೇಫ್‌ ಮಾಡಿದ ಪೊಲೀಸ್

Advertisement

ಕೋಲಾರ: ಬೀದಿ ನಾಯಿಗಳ ದಾಳಿಗೆ ಒಳಗಾದ ಒಬ್ಬೊಂಟಿ ಬಾಲಕನ ಜೀವ ಉಳಿಸುವಲ್ಲಿ ರಾತ್ರಿ ಗಸ್ತಿನ ಪೊಲೀಸ್ ಪೇದೆಯ ಸಾಹಸ ಮತ್ತು ಮಾನವೀಯತೆ ಮೆರೆದಿದ್ದು, ನಗರದ ಚಿಕ್ಕಬಳ್ಳಾಪುರ ರಸ್ತೆಯ ರಹಮತ್ ನಗರದಲ್ಲಿ ತಡರಾತ್ರಿಯಲ್ಲಿ ಈ ದುರ್ಘಟನೆ ಜರುಗಿದೆ.
ನಗರದ ಗಲ್‌ಪೇಟೆ ಪೊಲೀಸ್ ಠಾಣೆಯ ಪೇದೆ ಹೆಚ್. ರಾಜಣ್ಣ ಮತ್ತು ಚಾಲಕ ಡಿ.ಎ.ಆರ್‌ನ ಮಂಜುನಾಥಶೆಟ್ಟಿ ಅವರು ೧೧೨ ವಾಹನದಲ್ಲಿ ರಾತ್ರಿ ಗಸ್ತಿಗೆ ನಿಯೋಜನೆ ಗೊಂಡಿದ್ದರು.
ಶ್ರೀನಿವಾಸಪುರ ವೃತ್ತದಿಂದ ಅರಹಳ್ಳಿ ಕಡೆ ೧೧೨ ವಾಹನ ಹೋಗುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ಮುಂಜಾನೆ ೩.೨೬ರ ಸಮಯದಲ್ಲಿ ಸುಮಾರು ೨೦ ರಿಂದ ೨೫ ಬೀದಿ ನಾಯಿಗಳ ಗುಂಪೊಂದು ದಾಳಿಯ ದೃಶ್ಯ ಕಂಡು ಬಂದು ಇದರ ಜೊತೆಗೆ ಕಿರುಚಾಟದ ಶಬ್ದವೂ ಕೇಳಿಬಂತು.
ಈ ದೃಶ್ಯವನ್ನು ಕಂಡು ಕೇಳಿದ ಪೇದೆ ರಾಜಣ್ಣ ತಕ್ಷಣವೇ ವಾಹನದಿಂದ ಇಳಿದು ದಾಳಿ ಮಾಡಿದ್ದ ಬೀದಿ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇದೇ ನಾಯಿಗಳು ಪೇದೆಯ ಮೇಲೆ ಪ್ರತಿದಾಳಿಗೆ ಮುಂದಾಗಿದ್ದು, ಇದ್ಯಾವುದನ್ನೂ ಲೆಕ್ಕಿಸದ ಪೇದೆ ರಾಜಣ್ಣ ಕಲ್ಲುಗಳಿಂದ ಹೊಡೆದು ಲಾಠಿಯಿಂದ ನಾಯಿಗಳನ್ನು ಅಟ್ಟಾಡಿಸಿ ಓಡಿಸಿದ್ದಾರೆ.
ಈ ಸಂದರ್ಭದಲ್ಲಿ ರಕ್ತದ ಮಡುವಿನಲ್ಲಿ ಬಾಲಕನೋರ್ವ ಕಂಡು ಬಂದಿದ್ದು ತೊಟ್ಟಿದ್ದ ಬಟ್ಟೆಗಳು ಕಿತ್ತುಬರುವಂತೆ ದೇಹದ ವಿವಿಧ ಭಾಗಗಳನ್ನು ಕಚ್ಚಿ ರಕ್ತಸ್ರಾವಕ್ಕೆ ಒಳಗಾಗಿದ್ದ ಬಾಲಕನನ್ನು ಬಾಚಿಕೊಂಡು ತಕ್ಷಣವೇ ಇಲಾಖೆಯ ವಾಹನದಲ್ಲಿ ನಗರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ರಾತ್ರಿ ಕರ್ತವ್ಯದಲ್ಲಿದ್ದ ಡಾ.ಕೆ.ಎಂ.ವರ್ಣಶ್ರೀ ಅವರು ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಬಾಲಕನಿಗೆ ತಕ್ಷಣವೇ ಅಗತ್ಯ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಅಪಾಯದಿಂದ ಪಾರು ಮಾಡಿದ್ದಾರೆ.
ಸದರಿ ಬಾಲಕನನ್ನು ವಿಚಾರಿಸಲಾಗಿ ಈತ ನಗರದ ರಹಮತ್ ನಗರದ ನಿವಾಸಿ ಅರಹಳ್ಳಿ ವೃತ್ತದಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಬಾಬು ಅವರ ಮಗ 8 ವರ್ಷದ ಜಾಫರ್ ಎಂದು ತಿಳಿದು ಬಂದಿದೆ. ನಂತರ ಅವರು ಮನೆಯವರಿಗೆ ಮಾಹಿತಿ ನೀಡಲಾಗಿ ಆತ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಮಾಜ್ ಮುಗಿಸಿ ಉಪವಾಸವಿದ್ದ ಈತ ತಡರಾತ್ರಿ ಗೆಳೆಯರ ಜೊತೆ ತಿರುಗಾಟಕ್ಕೆ ಹೋಗಿದ್ದು, ನಂತರ ಒಬ್ಬೊಂಟಿಯಾಗಿ ಬರುವಾಗ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದು ತಿಳಿದುಬಂತು.
ಬೀದಿ ನಾಯಿಗಳ ದಾಳಿಗೆ ತುತ್ತಾದ ಒಬ್ಬೊಂಟಿ ಬಾಲಕನ ಜೀವ ಉಳಿಸಿದ ಪೇದೆ ರಾಜಣ್ಣ ಅವರ ಸಾಹಸ ಮತ್ತು ಮಾನವೀಯತೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.