ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ

Advertisement

ಶ್ರೀರಂಗಪಟ್ಟಣ: ಮಳೆಯಿಲ್ಲದೆ ಬೇಸಿಗೆಯಿಂದಾಗಿ ಬೆಳೆದು ನಿಂತಿರುವ ಬೆಳೆಗಳು ಒಣಗುತ್ತಿದ್ದು, ತತ್ ಕ್ಷಣ ನಾಲೆಗಳಿಗೆ ನೀರು ಹರಿಸಬೇಕೆಂದು ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ತಾಲ್ಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮದ ನೂರಾರು ರೈತರು ಪ್ರತಿಭಟನೆ ನಡೆಸಿ ನಾಲೆಗಳಿಗೆ ನೀರು ಬಿಡುವಂತೆ ಆಗ್ರಹಿಸಿದರು.
ಪಟ್ಟಣದ ಕುವೆಂಪು ವೃತ್ತದಿಂದ ಸ್ಕೂಟರ್ ಹಾಗೂ ಟ್ರಾಕ್ಟರ್ ಮೂಲಕ‌ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಬಳಿಕ ತಾಲ್ಲೂಕು ಕಚೇರಿ‌ ಎದುರು ಧರಣಿ ಕುಳಿತು ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿದರು.


ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದಾಗಿ‌ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇಲ್ಲಿನ‌ ಜನ- ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಬೆಳೆದು ನಿಂತಿರುವ ಕಬ್ಬಿನ ಬೆಳೆ ಒಣಗುತ್ತಿವೆ. ನಾಟಿ ಮಾಡಿರುವ ಭತ್ತದ ಪೈರು ಬಾಡುತ್ತಿವೆ. ಧನ- ಕರುಗಳಿಗೆ ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಬಯಲು ಸೀಮೆ ಪ್ರದೇಶ ಬರಡಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಕಾವೇರಿ ನೀರು ವಿಷಯದಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಪಕ್ಷಾತೀತವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನೀರಿನ ರಕ್ಷಣೆಗೆ ಮುಂದಾಗಬೇಕೆಂದು ರೈತರು ಆಗ್ರಹಿಸಿದರು.