ನಾಲ್ಕರಿಂದ ಆರು ತಿಂಗಳಲ್ಲಿ ಸರ್ಕಾರ ಬದಲಾವಣೆ

Advertisement

ಪುಣೆ: ಮಹಾರಾಷ್ಟ್ರದಲ್ಲಿನ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವನ್ನು ನಾಲ್ಕರಿಂದ ಆರು ತಿಂಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಮೂರು ದಿನಗಳ ಬಾರಾಮತಿ ಪ್ರವಾಸದಲ್ಲಿರುವ ಪವಾರ್, ನೀರಿನ ಬಿಕ್ಕಟ್ಟು ಪರಿಹರಿಸದ ರೈತರಿಗೆ ಸಹಾಯ ಮಾಡದ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಮಹಾಯುತಿ ಸರ್ಕಾರ ಜನಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಸರ್ಕಾರ ಬದಲಾಯಿಸದ ಹೊರತು ಪರಿಸ್ಥಿತಿ ಬದಲಾಗುವುದಿಲ್ಲ. ಇದನ್ನು ಮಾಡಲು ಕನಿಷ್ಠ ನಾಲ್ಕರಿಂದ ಆರು ತಿಂಗಳು ಬೇಕಾಗುತ್ತದೆ ಎಂದರು.
ರಾಜ್ಯ ಸರ್ಕಾರ ಹೈನುಗಾರರಿಗೆ ಉತ್ತಮ ಬೆಲೆ ನೀಡುತ್ತಿಲ್ಲ ಎಂದು ಟೀಕಿಸಿದ ಅವರು, ರಾಜ್ಯಾದ್ಯಂತ ಆಂದೋಲನಕ್ಕೆ ಸಿದ್ಧರಾಗುವಂತೆ ಹೇಳಿದರು. `ನಮಗೆ ಬೇಕಾದ ಬೆಲೆ ಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರಬೇಕಾಗುತ್ತದೆ. ಆಂದೋಲನಕ್ಕಾಗಿ ನಾನೂ ಬೀದಿಗಿಳಿಯಲು ಸಿದ್ಧನಿದ್ದೇನೆ. ಎಲ್ಲ ರೈತರು ನನ್ನೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆಗೆ ಸೇರಬಹುದು ಎಂದು ಪವಾರ್ ಹೇಳಿದರು.