ನಾವು ಕೇಂದ್ರದ ಮಾನದಂಡಕ್ಕೂ ಕಾಯಲಿಲ್ಲ

ಬೊಮ್ಮಾಯಿ
Advertisement

ಮಂಗಳೂರು: ಜೆಡಿಎಸ್-ಬಿಜೆಪಿ ಮೈತ್ರಿ ಟಿಕೆಟ್ ಹಂಚಿಕೆ, ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈತ್ರಿ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿರುವ ಅವರು ಜೆಡಿಎಸ್-ಬಿಜೆಪಿ ಮೈತ್ರಿ ಟಿಕೆಟ್ ಹಂಚಿಕೆ, ಕ್ಷೇತ್ರದ ಹಂಚಿಕೆ ಹಂತ ತಲುಪಿಲ್ಲ, ಸದ್ಯ ಪ್ರಾಥಮಿಕ ಹಂತದಲ್ಲಿದೆ, ಬರುವ ದಿನಗಳಲ್ಲಿ ವರಿಷ್ಠರು ಚರ್ಚಿಸುತ್ತಾರೆ, ಮೈತ್ರಿ ಸಮಯದಲ್ಲಿ ನಮ್ಮನ್ನ ಮಾತನಾಡಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷಗಳು ಒಂದಾಗಿ ಹೆಚ್ಚು ಸೀಟ್ ಪಡೆಯುವ ಉದ್ದೇಶವಿದೆ, ಈವರೆಗೂ ನಮ್ಮ ಅಭಿಪ್ರಾಯ ಪಡೆಯುವ ಹಂತಕ್ಕೆ ಬಂದಿಲ್ಲ ಎಂದರು.

ಬರಗಾಲ ಘೋಷಣೆಯಲ್ಲಿ ವಿಳಂಬ: ಮಾನ್ಸೂನ್ ಪೂರ್ವದ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು, ಬರಗಾಲ ಘೋಷಣೆಯಲ್ಲಿ ವಿಳಂಬ ಮಾಡಿದ್ದಾರೆ, ಸರ್ಕಾರ ವರದಿ ಪಡೆಯುವಲ್ಲಿ ವಿಳಂಬ ಮಾಡಿದೆ, ಈಗ ಮುಂಗಾರು ಹೋಗಿದೆ, ರೈತರಿಗೆ ಸಹಾಯ ಮಾಡಲು ಆಗಲ್ಲ – ಕನಿಷ್ಠ ಬೆಳೆ ನಷ್ಟ ಪರಿಹಾರವಾದ್ರೂ ಇವರು ಕೊಡಬೇಕು. ನಮ್ಮ ಅವಧಿಯಲ್ಲಿ ಪ್ರವಾಹದ ಪರಿಸ್ಥಿತಿ ಸಂದರ್ಭದಲ್ಲಿ ಒಂದು ತಿಂಗಳಲ್ಲೇ ಪರಿಹಾರ ಕೊಟ್ಟಿದ್ದೇವೆ, ನಾವು ಕೇಂದ್ರದ ಮಾನದಂಡಕ್ಕೂ ಕಾಯಲಿಲ್ಲ, ಆದರೆ ಇವರು ಕೇಂದ್ರದ ಮಾನದಂಡ ಅಂತಿದಾರೆ, ಕಷ್ಟದಲ್ಲಿರೋ ಜನರಿಗೆ ಸಹಾಯ ಮಾಡುವ ಮನೋಭಾವ ಈ ಸರಕಾರಕ್ಕೆ ಇಲ್ಲ ಕುಂಟು ನೆಪ ಹೇಳಿಕೊಂಡು ಸರ್ಕಾರ ಕಾಲ ಕಳೀತಿದೆ, ಸುಮಾರು 25 ಸಾವಿರ ಕೋಟಿ ಸಾಲದ ಬದಲು ರೈತರಿಗೆ ಏಳು ಸಾವಿರ ಕೋಟಿ ಅಷ್ಟೇ ಕೊಟ್ಟಿದ್ದಾರೆ,

ಕಾವೇರಿ ನೀರು ವಿಚಾರ: ಕಾವೇರಿ ವಿಚಾರದಲ್ಲೂ ಮೊದಲಿನಿಂದಲೂ ನಾವು ಹೇಳಿಕೊಂಡು ಬಂದಿದ್ದೇವೆ, ತಮಿಳುನಾಡಿನ ಡ್ಯಾಂಗಳಲ್ಲಿ ನೀರಿನ ಸ್ಟಾಕ್ ಹೆಚ್ಚಾಗಿದೆ, ಆದರೂ ರಾಜ್ಯ ಸರ್ಕಾರ ನೀರು ಬಿಡುತ್ತಾ ಇತ್ತು, ಕಾನೂನಾತ್ಮಕವಾಗಿ ಗಂಭೀರವಾಗಿ ತೆಗೆದುಕೊಂಡು ಸರ್ಕಾರ ಹೋರಾಟ ಮಾಡುತ್ತಿಲ್ಲ, ಹೀಗಾಗಿ ಕಾವೇರಿ ಜಲಾನಯನ ರೈತರಿಗೆ, ಬೆಂಗಳೂರಿಗರಿಗೆ ಕಷ್ಟ ಆಗಲಿದೆ, ಇವತ್ತು ಪರಿಹಾರ ಕಾನೂನಾತ್ಮಕ ಮತ್ತು ತಮಿಳುನಾಡನ್ನು ಒಪ್ಪಿಸುವುದು ಆದರೆ ನಮ್ಮ ಸಿಎಂ ತಮಿಳುನಾಡಿನ ಸ್ಟಾಲಿನ್ ಅವರ ಜೊತೆಗೆ ಮಾತನಾಡೋಕೇ ತಯಾರಿಲ್ಲ, ಇಂಡಿಯಾ ಒಕ್ಕೂಟ ಅಂತ ಹೇಳ್ತಾರೆ, ಇವರು ನಮ್ಮ‌ ನೀರಿನ ಹಕ್ಕಿನ ಬಗ್ಗೆ ಮಾತನಾಡಲ್ಲ, ಸದ್ಯ ನೀರು ಬಿಡಲ್ಲ ಅನ್ನೋ ತಮ್ಮ ನಿಲುವಿಗೆ ಅವರು ಗಟ್ಟಿಯಾಗಿ ನಿಲ್ಲಬೇಕು. ನಾವು ಈ ನಿಲುವಿನ ಬಗ್ಗೆ ಸರ್ಕಾರದ ಜೊತೆ ನಿಲ್ಲುತ್ತೇವೆ. ಒಂದು ವೇಳೆ ನೀರು ಬಿಟ್ಟರೆ ನಾವು ಸರ್ಕಾರದ ವಿರುದ್ದ ಹೋರಾಡುತ್ತೇವೆ ಎಂದರು.