ನಾ ಬಂದೆ ಅಂದ್ರಗಿನಾ…

Advertisement

ನಾ ಬಂದೆ.. ನಾ… ಬಂದೆ ಎಂದು ಕೆಂಪು ಹಾಕಿಕೊಂಡು ಆ ಪಳ್ಳಾರಿ ಕಡ್ಡಿ… ಸ್ಲೋ ಮೋಷನ್‌ನಲ್ಲಿ ಬಾವುಟ ಹಿಡಿದು ಬಂದದ್ದು ಕಂಡ ಕೂಡಲೇ…. ಮಾಮುಲು ಅಂದ್ರಗಿನಾ… ಅಂದ್ರಗಿನಾ ಎಂದು ಒಂದು ಕೈಯಲ್ಲಿ ಗಡ್ಡ ನೀವಿಕೊಳ್ಳುತ್ತ… ಇನ್ನೊಂದು ಕೈಯಲ್ಲಿ ಜೋರಾಗಿ ಬರುತ್ತಿದ್ದ ಆನಂದ ಭಾಷ್ಪಗಳನ್ನು ಒರೆಸಿಕೊಳ್ಳುತ್ತ ಬಂದನಾದರೂ ಆತನ ಬಾಯಿಂದ ಮಾತೇ ಹೊರಡಲಿಲ್ಲ. ಗಂಟಲ ಸೆರೆಗಳು ಉಬ್ಬಿದ್ದವು. ಸಿಟ್ಯೂರಪ್ಪನವರು ಬಂದ್ಯಾ… ಬಾ..ಬಾ ಎಂದು ಹೆಗಲಮೇಲೆ ಕೈ ಹಾಕಿಕೊಂಡು ಕರೆದುಕೊಂಡು ಹೋಗಿ ಕುರ್ಚಿಯ ಮೇಲೆ ಕೂಡಿಸಿ.. ಹಣೆಗೆ ಇಷ್ಟಗಲ ಕುಂಕುಮ ಹಚ್ಚಿದರು. ಕೆಲವರು ಬಂದು ಆರತಿ ಬೆಳಗಿದರು. ತಟ್ಟೆಯಲ್ಲಿ ಎಷ್ಟಾದರೂ ನೋಟು ಹಾಕಬೇಕು ಎಂದು ಕಿಸೆಯಲ್ಲಿ ಕೈ ಹಾಕುತ್ತಿದ್ದಾಗ… ಆತನನ್ನು ತಡೆದಿದ್ದು ಅದೇ ಮಾಮುಲು. ಇನ್ನು ಮುಂದೆ ಬೇಕಾದಷ್ಟು ಆರತಿಗಳು ನಡೆಯುತ್ತವೆ ಆಗ ಹಾಕುವಿಯಂತೆ ಎಂದು ಹೇಳಿದಾಗ ಕೆಂಪಂಗಿಯಾತ ಮತ್ತೆ ಕಿಸೆಯಲ್ಲಿ ಇಟ್ಟುಕೊಂಡು ಬಾಯಿ ಒರೆಸಿಕೊಂಡು ಸುಮ್ಮನಾದ. ಅತ್ತ ಸೋದಿ ಮಾಮಾ, ಲಮಿತ್ ಕಾಕಾ.. ಅವರೆಲ್ಲರಿಗೂ ಫೋನ್ ಮಾಡಿ ಮಾಮೋರೆ ನಾ ಬಂದೆ.. ನಾ ಬಂದೆ ಎಂದು ಹೇಳಿದಾಗ… ಫೋನ್ ರಕ್ ಅಭಿ ಎಂದು ಅಂದರಂತೆ. ಸಿಟ್ಯೂರಪ್ಪನವರು ನಾ ಇರುವವರೆಗೆ ನೀ ಹೆದರಬೇಡ ಎಂದು ಹೇಳಿದ್ದೇ ತಡ.. ಹೀಗೆ ಯಾರು ಹೇಳುತ್ತಾರೆ? ನೀವೇನೂ ಚಿಂತೆ ಮಾಡಬೇಡಿ… ನಾನು ನಿಮ್ಮ ಜತೆ ಇರುವವರೆಗೆ ಅಂಜಬೇಡಿ… ಅಲ್ಲಿಯದೆಲ್ಲ ನಾನು ನೋಡಿಕೊಳ್ಳುತ್ತೇನೆ… ಭಯ ಬೇಡ… ಭಯ ಬೇಡ ಎಂದು ಹೇಳುತ್ತಿದ್ದಂತೆ… ಇದೊಂದು ಕಡಿಮೆಯಾಗಿತ್ತು. ಎಂದು ಮದ್ರಾಮಣ್ಣನವರು ಹೇಳಿದರು. ಅಷ್ಟರಲ್ಲಿ ಆ ಕೆಂಪಂಗಿ ಪಡ್ಡಿ.. ಕೇಸ್ವರಪ್ಪರಿಗೆ ಕಾಲ್ ಮಾಡಿ.. ನೀನು ಬಾ.. ನೀನು ಬಾ ಎಂದಾಗ… ಆತ ಪುನಃ ನೋ ವೇ… ಚಾನ್ಸೇ ಇಲ್ಲ ಚಾನ್ಸೇ ಇಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದರಂತೆ. ನೀನು ಮೊದಲಿನ ಹಾಗೆ ಇರಬೇಡ… ಎಲ್ಲರ ಜತೆ ಹೊಂದಿಕೊಂಡು ಹೋಗು… ವಿಶೇಷವಾಗಿ ಮೇಲಿನವರು ಏನು ಹೇಳುತ್ತಾರೋ ಅದನ್ನು ಕೇಳುತ್ತ ಹೋಗು… ನಿನ್ನ ಎಲ್ಲ ಕೆಲಸವಾಗುತ್ತದೆ ಎಂದು ರಾಂಗ್ ನಂಬರ್‌ನಿಂದ ಬಂದ ಮೆಸೇಜನ್ನು ಎಲ್ಲರಿಗೂ ತೋರಿಸಿಕೊಂಡು ನೋಡಿದ್ಯಾ… ನನಗೆ ಮೆಸೇಜು ಬಂದಿದೆ ಎಂದು ಹೇಳುತ್ತ ತಿರುಗಾಡಿದ ಪಳ್ಳಾರಿ ಕಡ್ಡಿ.