ನಿಂದಕರ ಮನೆ ಮುಂದೆ ಮನೆ ಮಾಡು

Advertisement

ಜೀವನದಲ್ಲಿ ನಾವು ಎಷ್ಟೆ ಉತ್ತಮರಾಗಿ ಬದುಕಿದರೂ ಕೂಡ ನಿಂದಕರು ನಮ್ಮನ್ನು ನಿಂದೆ ಮಾಡುವವರು ಇದ್ದೇ ಇರುತ್ತಾರೆ. ಪ್ರತಿ ಹಂತದಲ್ಲಿಯೂ ನಿಂದಕರು ನಿಂದೆ ಮಾಡುವದರಿಂದ ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಾಯಕವಾಗುವದು.
ನಿಂದಕರಿರಬೇಕು…ಸಂದಿ ಗೊಂದಿಗಳಲಿ ಹಂದಿಗಳಿದ್ದಂತೆ… ಎಂದು ಕಟು ಶಬ್ದಗಳಲ್ಲಿ ದಾಸರು ಹೇಳಿದ್ದಾರೆ. ನಿಂದಕರು ಇರಲೇಬೇಕು. ಸಂಸಾರದ ಅಮಲಿನಲ್ಲಿ ನಾವು ಮಾಡಬಾರದ ಕರ್ಮಗಳನ್ನು ಮಾಡಿ ಅದನ್ನು ಅರಗಿಸಿಕೊಳ್ಳದೇ ಕಷ್ಟಕ್ಕೆ ಗುರಿಯಾಗುತ್ತೇವೆ. ನಿಂದಕರು ನಮ್ಮ ಚಲನವಲನಗಳನ್ನೇ ನೋಡುತ್ತಿದ್ದು. ಅಂಥ ನಮ್ಮ ದೋಷಗಳನ್ನು ಎತ್ತಿ ಆಡಿಕೊಳ್ಳುವದರಿಂದ ಅವರಿಂದಲಾದರೂ ಸ್ವೇಚ್ಛೆಯಿಂದ ವರ್ತಿಸುವದನ್ನು ಬಿಟ್ಟು ವ್ಯಕ್ತಿಗತವಾಗಿ ಸಾಮಾಜಿಕವಾಗಿ ಎಚ್ಚರಿಕೆಯಿಂದ ಬದುಕುತ್ತೇವೆ.
ಹಾಗಂತ ಒಳ್ಳೆಯವರಿಗೂ ಕೂಡ ನಿಂದಕರು ನಿಂದೆ ಮಾಡದೆ ಬಿಡುವದಿಲ್ಲ. ಹೀಗೆ ಉತ್ತಮ ನಡೆ ಇದ್ದವರಿಗೆ ನಿಂದೆಗಳು ಎದುರಾದಷ್ಟು ಎಚ್ಚರವಾಗಿಯೇ ಬದುಕು ನಡೆಸುತ್ತಾರೆ. ಸಮಾಜದ ರೀತಿ ನೀತಿ ಅಂಕುಶಗಳನ್ನು ಇಟ್ಟುಕೊಂಡು ಸತ್ಕರ್ಮಗಳನ್ನು ಮಾಡುತ್ತ
ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ ಎಂಬಂತೆ ಪುಣ್ಯ ಸಂಪಾದನೆಗಾಗಿ ಪುಣ್ಯ ಕಾರ್ಯಗಳನ್ನು ಮಾಡಬೇಕು. ಗಂಧ ತೀಡಿದಷ್ಟು ಸುಗಂಧವೇ ಬರುವಂತೆ.. ಊದುಬತ್ತಿ ಹೊತ್ತಿ ಉರಿದಷ್ಟು ಪರಿಮಳ ಸೂಸುವಂತೆ ಉತ್ತಮರಿಂದ ಒಳ್ಳೆಯ ಸತ್ಕರ್ಮಗಳೇ ಬರುತ್ತವೆ. ಕುಲುಮೆಯಲ್ಲಿ ಸುಡುವ ಚಿನ್ನ ತನ್ನ ಟಂಕವನ್ನು ಕಳೆದುಕೊಳ್ಳುತ್ತದೆ.
ಹೀಗಾಗಿ ನಿಂದಕರಿದ್ದಲ್ಲಿಯೇ ಮನೆ ಮಾಡು ಸಚ್ಚಾರಿತ್ರö್ಯದ ಬದುಕು ನಡೆಸಬೇಕು.
ಬೆಟ್ಟದಾ ಮೇಲೊಂದು ಮನೆ ಮಾಡಿ
ಮೃಗಗಳಿಗೆ ಅಂಜಿದೊಡೆ ಎಂತಯ್ಯಾ…
ಸಮುದ್ರದಾ ತಟದಲ್ಲಿ ಮನೆಯ ಮಾಡಿ
ನೊರೆತೆರೆಗಳಿಗೆ ಅಂಜಿದೆಡೆ ಎಂತಯ್ಯಾ ಎಂದು ಅಕ್ಕ ಕೇಳಿದ್ದಾಳೆ. ಅಂಥವರ ಮಧ್ಯೆಯೆ ಬದುಕು ನಡೆಸಬೇಕು ಎಂದೂ ಹೇಳಿದ್ದಾಳೆ.
ನಿಂದಕರು ಸಂತರಿಗೆ ಶರಣರಿಗೂ ಬಿಟ್ಟಿಲ್ಲ. ಬಸವಣ್ಣನವರಿಗೆ ಕೊಂಡಿ ಮಂಚಣ್ಣ ನಿಂದಕನಾಗಿದ್ದ, ಪೈಗಂಬರರಿಗೆ ವಾಜೀದ್ ನಿಂದಕನಾಗಿದ್ದ, ಸಿದ್ಧಾರೂಢರಿಗೂ ಮತ್ತು ಹಜರತ್ ಹುಸೇನರಿಗೂ ಕೂಡ ನಿಂದಕರು ನಿಂದೆ ಮಾಡುವದನ್ನು ಬಿಟ್ಟಿಲ್ಲ. ಅಷ್ಟೆ ಅಲ್ಲ; ಅವರಿಗೆ ಕಿರುಕುಳ ಕೊಡುವದನ್ನು ಬಿಡಲಿಲ್ಲ. ಇಹದ ಬದುಕಿನಲ್ಲಿ ಒಳ್ಳೆಯತನದಲ್ಲಿ ನಡೆಯಲು ನಿಂದಕರು ಮೇಲಿಂದ ಮೇಲೆ ಪರೀಕ್ಷೆ ಮಾಡಿದಂತೆ ಪರೀಕ್ಷಕರೇ ಆಗಿರುತ್ತಾರೆ ಎಂಬುದನ್ನು ಮರೆಯಕೂಡದು.