ನಿಮ್ಮ ಸಹಿಷ್ಣುತೆ ಹೆಚ್ಚಿಸಿಕೊಳ್ಳಿ

Advertisement

ಮನಸ್ಸು ಹೆಚ್ಚು, ಹೆಚ್ಚು ಎಂಬ ಪೋಷಣೆಯ ಮೇಲೆ ಜೀವಿಸುತ್ತದೆ. ಹೆಚ್ಚು, ಹೆಚ್ಚು ಎಂಬುದರಿಂದ ದುಃಖ ಪ್ರಾರಂಭವಾಗುತ್ತದೆ. ದುಃಖದಿಂದ ನೀವು ಸ್ಥೂಲ ವ್ಯಕ್ತಿತ್ವದವರಾಗುತ್ತೀರಿ, ಭಾರವಾದ ಮನಸ್ಸುಳ್ಳವರಾಗುತ್ತೀರಿ. ಜಗತ್ತಿನಲ್ಲಿ ಮುಳುಗಿರುವ ವ್ಯಕ್ತಿಯು ದುಃಖಿಯಾದಾಗ ತನ್ನ ಸುತ್ತಲೂ ಇರುವ ಜನರನ್ನು, ವ್ಯವಸ್ಥೆಯನ್ನು ಮತ್ತು ಜಗತ್ತಿನ ಎಲ್ಲದ್ದನ್ನೂ ದೂಷಿಸುತ್ತಾನೆ. ಸಾಧಕರು ದುಃಖಿಗಳಾದಾಗ ಜಗತ್ತನ್ನು ದೂಷಿಸುತ್ತಾರೆ. ಇದರೊಂದಿಗೆ ಪಥವನ್ನು, ಜ್ಞಾನವನ್ನು ಮತ್ತು ತಮ್ಮನ್ನೂ ದೂಷಿಸಿಕೊಳ್ಳುತ್ತಾರೆ.
ಆದರೆ ಸಾಧಕರು ಎಲ್ಲವನ್ನೂ ಹೆಚ್ಚಾಗಿ ಆನಂದಿಸುತ್ತಾರೆ. ಸಾಧಕರಿಗೆ ಜೀವನದಲ್ಲಿ ಹೆಚ್ಚು ಪ್ರೇಮವಿದೆ ಮತ್ತು ನೋವೂ ಸಹ ಹೆಚ್ಚಾಗಿರುತ್ತದೆ. ಸಂತೋಷವು ಹೆಚ್ಚಾಗಿದ್ದಾಗ, ಅದರ ವಿರುದ್ಧವಾದ ವಿಷಯಗಳು ಹೆಚ್ಚಾಗಿ ಎದ್ದು ಕಾಣುತ್ತವೆ. ವಿಷಯಗಳು ಹೇಗಿದೆಯೊ ಹಾಗೆಯೇ ಕಾಣಲು, ಪಥವನ್ನು, ತಮ್ಮನ್ನು, ಜಗತ್ತನ್ನು ದೂಷಿಸದಿರಲು ಒಂದು ಮಟ್ಟದ ಪ್ರೌಢತೆಯು ಅವಶ್ಯಕ. ಇವುಗಳನ್ನು ದಾಟುವುದೆಂದರೆ ದೊಡ್ಡ ಅಡಚಣೆಯನ್ನು ಜಿಗಿದಂತೆ. ಇದನ್ನು ಒಮ್ಮೆ ದಾಟಿಬಿಟ್ಟರೆ, ಅದರ ನಂತರ ಬೀಳಲು ಸಾಧ್ಯವೇ ಇಲ್ಲ.
ಎಲ್ಲವೂ ಬದಲಿಸುತ್ತಿದೆ ಎಂದು ತಿಳಿದುಕೊಂಡಾಗ, ಎಲ್ಲ ಸಂಬಂಧಗಳು, ಜನರು, ದೇಹ, ಭಾವನೆಗಳು ಎಲ್ಲವೂ ಬದಲಿಸುತ್ತವೆ ಎಂದು ತಿಳಿದುಕೊಂಡಾಗ ದುಃಖಕ್ಕೇ ಅಂಟಿಕೊಂಡಿರುವ ಮನಸ್ಸು ಮತ್ತೆ ಮರಳಿ ನಿಮ್ಮೆಡೆಗೆ ಬರುತ್ತದೆ. `ನನ್ನದು, ನನ್ನದು’ ಎಂಬುದನ್ನು ಬಿಟ್ಟು ಆತ್ಮದೆಡೆಗೆ ಮರಳಿ ಬರುತ್ತದೆ ಮನಸ್ಸು. ನನ್ನದು ಎಂಬುದನ್ನು ಬಿಟ್ಟು ಆತ್ಮದೆಡೆಗೆ ಬಂದಾಗ ನಿಮಗೆ ದುಃಖದಿಂದ ಬಿಡುಗಡೆಯಾಗಿ ತೃಪ್ತಿ ಮತ್ತು ಸ್ವಾತಂತ್ರ ದೊರಕುತ್ತದೆ.
ಆತ್ಮದೆಡೆಗೆ ಹಿಂದಿರುಗಲು ಸಾಧನೆ, ಶರಣಾಗತಿ ಅವಶ್ಯಕ. ಭಗವಂತ ನಿಮ್ಮನ್ನು ಪರೀಕ್ಷಿಸುವುದಿಲ್ಲ. ಪರೀಕ್ಷಿಸುವುದು ಅಜ್ಞಾನದ ಒಂದು ಭಾಗ, ಭಗವಂತನಿಗೆ ನಿಮ್ಮ ಸಾಮರ್ಥ್ಯ ತಿಳಿದಿದೆ. ಆದ್ದರಿಂದ ಭಗವಂತನು
ನಿಮ್ಮನ್ನು ಪರೀಕ್ಷಿಸುವ ಗೋಜಿಗೇಕೆ ಹೋಗಬೇಕು? ಹಾಗಿದ್ದರೆ ಈ ದುಃಖವೆಲ್ಲ ಏಕೆ? ನಿಮ್ಮಲ್ಲಿರುವ ತಿತಿಕ್ಷೆಯನ್ನು, ಸಹಿಷ್ಣುತೆಯನ್ನು ಹೆಚ್ಚಿಸಲು. ನಿಮ್ಮಲ್ಲಿರುವ ಸಹಿಷ್ಣುತೆಯನ್ನು ಪ್ರಾರ್ಥನೆಯಿಂದ, ನಿಮಗೆ ಸಹನೆಗೆ ಬೃಹತ್ ಸವಾಲನ್ನೊಡ್ಡುವುದರಿಂದ ಹೆಚ್ಚಿಸಿಕೊಳ್ಳಬಹುದು.