ನಿರುದ್ಯೋಗಿಗಳತ್ತ ಕಾಂಗ್ರೆಸ್ ಚಿತ್ತ: ನಾಲ್ಕನೇ ಗ್ಯಾರಂಟಿ ಘೋಷಣೆ

Advertisement

ಬೆಳಗಾವಿ: ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಯುವ ನಿಧಿ ಹೆಸರಿನಲ್ಲಿ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯಾಗಿ ಪದವೀಧರರಿಗೆ 3,000 ರೂ, ಡಿಪ್ಲೊಮಾ ಪದವೀಧರರಿಗೆ 1500 ರೂ, ನೀಡಲಾಗುವುದು ಎಂದು ರಾಹುಲ್ ಗಾಂಧಿ ಘೋಷಣೆ ಮಾಡಿದರು. ಬೆಳಗಾವಿಯ ಸಿಪಿಎಡ್​ ಮೈದಾನದಲ್ಲಿ ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಕಾರ್ಡ್ ಅನ್ನು ಸೋಮವಾರ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಎಐಸಿಸಿ ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಬೆಳಗಾವಿಯ ಪವಿತ್ರ ಭೂಮಿಯ ಮೇಲೆ ಕಾಲಿಟ್ಟಿದ್ದೇನೆ. ಮಹಾತ್ಮಾ ಗಾಂಧೀಜಿ ಅವರು ಇದೇ ನೆಲದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ತಾವೆಲ್ಲರೂ ಸೇರಿ ಈಗ ನನ್ನನ್ನು ಅದೇ ಸ್ಥಾನದಲ್ಲಿ ಕೂರಿಸಿದ್ದೀರಿ, ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಒಂದು ಕಾಲದಲ್ಲಿ ಬೆಳಗಾವಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದ್ದ ಜಿಲ್ಲೆ. ಇಲ್ಲಿ ನಾವು 15 – 16 ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೇವು. ಇಂದು ಇಲ್ಲಿ ಸೇರಿರುವ ಜನರು, ಮುಖಂಡರ ಒಗ್ಗಟ್ಟು ನೋಡಿದರೆ ಮುಂಬರುವ ಚುನಾವಣೆಯಲ್ಲಿ 18ಕ್ಕೆ 18 ಸ್ಥಾನಗಳಲ್ಲೂ ಗೆಲ್ಲಿಸುತ್ತೀರಿ ಎಂದು ನಂಬುತ್ತೇನೆ. ಈ ಬಾರಿ ವಾತಾವರಣವೂ ಅದಕ್ಕೆ ಪೂರಕವಾಗಿದೆ ಎಂದರು.