ನಿವೃತ್ತ ಪ್ರಾಧ್ಯಾಪಕರಿಗೆ ಆನ್‌ಲೈನ್‌ನಲ್ಲಿ ೧.೧೯ ಕೋಟಿ ವಂಚನೆ

Advertisement

ಹುಬ್ಬಳ್ಳಿ: ಕೆನಡಾದ ಆಟೋವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ಮಾಡಿದ್ದ ಧಾರವಾಡದ ವ್ಯಕ್ತಿಗೆ ಅಪರಿಚಿತರು ೧,೧೯ ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಂಡವರು ಧಾರವಾಡದ ಸಪ್ತಾಪುರದ ಶಿವನಾಗಪ್ಪ ಕೋರಿಶೆಟ್ಟರ್ ಎಂಬುವರಾಗಿದ್ದಾರೆ.
ವಂಚನೆ ಮಾಡಿದ್ದು ಹೇಗೆ?
ಶಿವನಾಗಪ್ಪ ಅವರು ಮೂವತ್ತು ವರ್ಷಗಳ ಹಿಂದೆ ಕೆನಡಾದ ಆಟೋವಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ ಮಾಹಿತಿಯನ್ನು ಅಪರಿಚಿತರು ಎಲ್ಲಿಂದಲೋ ಪಡೆದುಕೊಂಡಿದ್ದಾರೆ.
ನಂತರ ಆಟೋವಾ ವಿಶ್ವವಿದ್ಯಾಲಯದಲ್ಲಿರುವ ಸಮಯದಲ್ಲಿ ಆಕಸ್ಮಿಕ ದುರ್ಘಟನೆಯಲ್ಲಿ ಮರಣ ಹೊಂದಿದ ಪ್ರೊ. ಜಾನ್ ಕ್ಲರ್ಕ್ ಈತನ ಹೆಂಡತಿ ದೋಬೇರಾ ಅವರು ಕ್ಯಾನ್ಸರ್ ಕಾಯಿಲೆಯಿಂದ ಸಾವು ಬದುಕಿನ ನಡುವೆ ಇಂಗ್ಲೆಂಡಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ನಂಬಿಸಿದ್ದಾರೆ.
ಹೀಗಾಗಿ, ತಮ್ಮ ಗಳಿಕೆಯ ೫.೫ ಡಾಲರ್ ಹಣವನ್ನು ನಿಮ್ಮ ದೇಶದ ಬಡವರಿಗೆ ಹಾಗೂ ನಿರಾಶ್ರಿತರಿಗೆ ಸಹಾಯ ಮಾಡಲು ಚಾರಿಟಿ ಟ್ರಸ್ಟ್ ಮಾಡಿಕೊಂಡು ಉಪಯೋಗಿಸಲು ನಿಮ್ಮ ಹೆಸರಿನಲ್ಲಿ ವಿಲ್ ಮಾಡಿದ್ದಾರೆ. ಆ ಪ್ರಕಾರ ೪೫,೬೯ ಕೋಟಿಯನ್ನು ದೆಹಲಿಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಹಣ ವರ್ಗಾಯಿಸಲಾಗಿದೆ. ಇದನ್ನು ನಿಮ್ಮ ಖಾತೆಗೆ ಜಮಾ ಮಾಡಲು ವಿವಿಧ ಶುಲ್ಕದ ಹೆಸರಿನಲ್ಲಿ ಆರ್‌ಬಿಐ ಲೆಟರ್ ಹೆಡ್ ಪ್ಯಾಡ್ ಹಾಗೂ ಮೇಲ್ ಮೂಲಕ ನಂಬಿಸಿ ಹಂತ ಹಂತವಾಗಿ ೧,೧೯,೨೫,೪೭೦ ರೂಪಾಯಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಲಾಗಿದೆ. ಈ ಕುರಿತು ಹುಬ್ಬಳ್ಳಿ ಧಾರವಾಡ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.