ನಿಶ್ಚಿತ ಪಿಂಚಣಿ ಸೌಲಭ್ಯಕ್ಕಾಗಿ ಶಿಕ್ಷಕನ ಪಾದಯಾತ್ರೆ

ಪಾದಯಾತ್ರೆ
Advertisement

ಕುಷ್ಟಗಿ: ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಕಾಲ್ಪನಿಕ ವೇತನ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಣ್ಣು ತೆರೆಸಲು ನಾನು ಸ್ವಯಂ ಪ್ರೇರತನಾಗಿ ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ಕಾಲ್ನಡಿಗೆಯ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ ಎಂದು ಬಸವನಬಾಗೇವಾಡಿ ತಾಲೂಕಿನ ಊಕ್ಕಲಿ ಗ್ರಾಮದ ಎನ್.ಇ.ಎಸ್.ಎಚ್ ಪ್ರೌಢಶಾಲೆಯ ಚಿತ್ರಕಲೆ ಶಿಕ್ಷಕ ಗಂಗಾಧರ ಎಸ್ ಪಾಟೀಲ ಹೇಳಿದರು.
ಕುಷ್ಟಗಿ ಪಟ್ಟಣಕ್ಕೆ ಗಂಗಾಧರ ಪಾಟೀಲ್ ಅವರ ಪಾದಯಾತ್ರೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಸ್ವಾಗತ ಮಾಡಿಕೊಂಡ ಬಳಿಕ ಮಾತನಾಡಿದರು, ಕಾಲ್ಪನಿಕ ವೇತನ ಜಾರಿಗೆ ತರಬೇಕು, 2006 ಕ್ಕೂ ಮೊದಲು ನೇಮಕವಾದ ನಂತರ ಅನುದಾನಕ್ಕೆ ಒಳಪಟ್ಟ ನೌಕರರ ಅನುದಾನ ರಹಿತ ಅವಧಿ ಸೇವೆ ಪರಿಗಣಿಸಿ ಹಳೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು. ಎಲ್ಲಾ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ಒದಗಿಸಿಕೊಡಬೇಕು ಸರಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ಯಾವುದೇ ತಾರತಮ್ಮ ಇಲ್ಲದೆ ಅನುದಾನಿತ ನೌಕರರಿಗೆ ಸಹ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದರು.
ಕಾಲ್ಪನಿಕ ವೇತನ ಸೌಲಭ್ಯ ಮತ್ತು ಪಿಂಚಣಿ ಸೌಲಭ್ಯ ದೊರೆಯದೇ ಈಗಾಗಲೇ ಸುಮಾರು 3 ಸಾವಿರಕ್ಕೂ ಹೆಚ್ಚು ನೌಕರರು ನಿವೃತ್ತರಾಗಿದ್ದಾರೆ. ಅನೇಕರು ಸೇವೆಯಲ್ಲಿ ಇರುವಾಗಲೇ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಕೆಲವು ನೌಕರರು ವೇತನಾನುದಾನಕ್ಕೆ ಒಳಪಡುವುದಕ್ಕೂ ಮುನ್ನವೇ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಅವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.