ನೀತಿಗೆ ಪ್ರಭುವಾಗು

Advertisement

ಪರೋಪಕಾರ, ದಯೆ, ಕರುಣೆಗಳಂತಹ ಮೌಲ್ಯಗಳನ್ನು ನಾವು ನೀತಿ ಎನ್ನುತ್ತೇವೆ. ಇಂಥ ನೀತಿಗಳನ್ನು ಯಾರು ಹೇಳಿದರು. ಯಾವ ಧರ್ಮದಿಂದ ತಂದುಕೊಂಡಿದ್ದೇವೆ..? ಹೀಗೆಲ್ಲ ಪ್ರಶ್ನೆ ಮಾಡಿಕೊಂಡರೇ, ಬಹುತೇಕವಾಗಿ ಎಲ್ಲ ಧರ್ಮಗಳು ಇಂತಹ ಮೌಲ್ಯಗಳನ್ನೇ ಹೇಳಿವೆ.
ಈ ರೀತಿಯ ಮಾನವೀಯ ಅಂತಃಕರಣದ ಮೌಲ್ಯಗಳ ಆಧಾರದ ಮೇಲೆ ಜೀವನ ನಡೆಸಿದರೆ ಅದು ನೀತಿ ಎನ್ನುತ್ತೇವೆ. ಇದು ನಿಯಮವೂ ಆಗಬಹುದು. ಆದರೆ ಕಡ್ಡಾಯವಲ್ಲ. ಬದಲಾಗಿ ತನ್ನನ್ನು ವಿಕಾಸಗೊಳಿಸುವುದಕ್ಕಾಗಿ ತಾನು ಉತ್ತಮ ಮಾನವ ಎನಿಸಿಕೊಳ್ಳುವುದಕ್ಕಾಗಿ ಇಂಥ ಮೌಲ್ಯಗಳ ದಾರಿಯಲ್ಲಿ ಸಾಗಬೇಕು ಸಾಮಾಜಿಕವಾಗಿ ಒಪ್ಪಿಕೊಂಡ ಅಂತಕರಣದ ನಡೆಗಳನ್ನು ನೀತಿ ಎನ್ನಬಹುದು. ನಿಯಮ ಎಂದರೆ ಕಡ್ಡಾಯ ಎಂಬರ್ಥದಲ್ಲಿ ಮಾಡಲೇಬೇಕು ಎಂಬ ಅರ್ಥ ಬರುತ್ತದೆ. ಆದರೆ ನೀತಿ ಎಂಬುದು ಚಾರಿತ್ರ್ಯವೆಂದು ಹೇಳಲಾಗುತ್ತದೆ. ಮತ್ತೊಬ್ಬರಿಗೆ ವಿನಾಕಾರಣ ಇಲ್ಲವೆ ತನ್ನ ಸ್ವಾರ್ಥ ಸಾಧನೆಗಾಗಲಿ ಅಮಾಯಕರಿಗೆ ಮತ್ತೊಬ್ಬರಿಗೆ ತೊಂದರೆ ಕೊಟ್ಟರೆ ಅದು ನೀತಿಗೇಡು ಎನಿಸಿಕೊಳ್ಳುತ್ತದೆ.
ನಿಸರ್ಗ ನಮಗೆ ಜೀವನದ ನೀತಿ ಪಾಠಗಳನ್ನು ಹೇಳಿಕೊಡುತ್ತದೆ. ಪ್ರಕೃತಿಯಲ್ಲಿನ ಪ್ರತಿಯೊಂದು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಅದು ತನ್ನ ನಡೆಯನ್ನು ಸಾರುತ್ತದೆ. ಧರೆ ಎಲ್ಲರನ್ನು ಸಲಹುತ್ತದೆ. ಎಲ್ಲ ಚರ ಜೀವಿಗಳಿಗೆ ಆಹಾರವನ್ನು ದೊರಕಿಸಿಕೊಡುತ್ತದೆ. ಅಗಾಧ ಸಂಯಮ ಶಕ್ತಿಯನ್ನು ಹೊಂದಿದೆ. ಪರೋಪಕಾರಿಯಾಗಿದೆ. ಇದೆ ಭೂಮಿಯ ಮೇಲೆ ಬೆಳೆದಿರುವ ಗಿಡ ಮರಗಳಿಂದಲೂ ಹಣ್ಣು ಸೇರಿದಂತೆ ಅದರಿಂದ ಬರುವ ಕಟ್ಟಿಗೆಯನ್ನು ಉಪಯೋಗಿಸುತ್ತೇವೆ. ಅದು ಪ್ರಕೃತಿಯ ಗುಣಧರ್ಮವಾಗಿದೆ.
ಇದನ್ನು ನಾವು ಪ್ರಕೃತಿಯಿಂದ ಕಲಿತಿಲ್ಲ. ಭೌತಿಕ ಪ್ರಪಂಚದ ಚಲನವಲನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡು ನೀತಿವಂತರಾಗಲಿಲ್ಲ. ಬದಲಾಗಿ ಪ್ರಕೃತಿಯನ್ನೇ ಹಾಳು ಮಾಡಿದೆವು. ಅದು ನಮ್ಮ ಮುಂದಿನ ಪೀಳಿಗೆಗೆ ಏನನ್ನೂ ಉಳಿಸಲಾಗದ ನೈತಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡೆವು ಎಂದರ್ಥ. ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವದು ನೈತಿಕತೆ ಎನಿಸಿಕೊಳ್ಳುತ್ತದೆ.
ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯೇ ಆಗು| ರಂಗಯ್ಯ
ಜ್ಯೋತಿಯೇ ಆಗು ಜಗಕ್ಕೆಲ್ಲ
ಎಂದು ಜಾನಪದ ತಾಯಿ ನಮ್ಮನ್ನು ನೈತಿಕ ಪಥದಲ್ಲಿ ಸಾಗಲು ಪ್ರೇರೇಪಣೆ ಕೊಡುತ್ತಾಳೆ. ನಾವು ಪ್ರಪಂಚದಲ್ಲಿ ಜಾತಿ, ಮತ, ಪಂಥಗಳಾಚೆಗೆ ನೀತಿಗೆ ಅರಸರಾಗಿ ಬಾಳಿದರೆ ಆಗ ನಂದನವನದ ತೋಟವಾಗುವುದರಲ್ಲಿ ಎರಡು ಮಾತಿಲ್ಲ.