ನೀತಿ ಆಯೋಗಕ್ಕೆ ಕಾಣದ ಬಡತನ

Advertisement

ದೆಹಲಿಯಲ್ಲಿ ಬೀದಿಯಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಿದ್ದರೂ, ರಾತ್ರಿ ವೇಳೆ ಮನೆ ಇಲ್ಲದೆ ರಸ್ತೆ ಬದಿ ಮತ್ತು ಸೇತುವೆ ಕೆಳಗೆ ಸಾವಿರಾರು ಜನ ಮಲಗುತ್ತಿದ್ದರೂ ನೀತಿ ಆಯೋಗದ ಕಣ್ಣಿಗೆ ಬಡವರೇ ಕಾಣುತ್ತಿಲ್ಲ. ಶೇಕಡ ೫ರಷ್ಟು ಮಾತ್ರ ಬಡತನವಿದೆ ಎಂದು ಆಯೋಗ ಹೇಳಿಕೊಂಡಿದೆ. ಇದಕ್ಕೆ ಸಮೀಕ್ಷೆಯ ವರದಿ ಕಾರಣ.
ಬಡತನ ಇಳಿಮುಖಗೊಂಡಿದ್ದರೆ ಸರ್ಕಾರ ೭೦ ಕೋಟಿ ಜನರಿಗೆ ಪ್ರತಿ ತಿಂಗಳೂ ೫ ಕೆಜಿ ಅಕ್ಕಿಯನ್ನು ಉಚಿತವಾಗಿ ಏಕೆ ನೀಡುತ್ತಿದೆ. ಬೇಳೆಕಾಳುಗಳನ್ನು ಖರೀದಿಸುವ ಸಾಮರ್ಥ್ಯ ಗ್ರಾಮೀಣ ಪ್ರದೇಶದಲ್ಲಿ ಶೇ, ೪.೯೧, ನಗರ ಪ್ರದೇಶದಲ್ಲಿ ಶೇ. ೩.೬ ಮಾತ್ರ ಏಕಿದೆ. ಮಕ್ಕಳಲ್ಲಿ ಶೇ. ೬೭.೧ ಮತ್ತು ಮಹಿಳೆಯರಲ್ಲಿ ಶೇ. ೫೭ ರಷ್ಟು ರಕ್ತಹೀನತೆ ಏಕಿದೆ. ನರೇಗಾ ಯೋಜನೆಯಲ್ಲಿ ದಿನಗೂಲಿಗಾಗಿ ೧೫.೪ ಕೋಟಿ ಜನ ಏಕೆ ನೋಂದಾಯಿಸಿ ಕೊಂಡಿದ್ದಾರೆ. ಇವರೆಲ್ಲ ಬಡವರಲ್ಲವೆ? ಗ್ರಾಮೀಣ ಭಾಗದಲ್ಲಿ ಉಚಿತ ಅಡುಗೆ ಅನಿಲ ನೀಡಲಾಗಿದೆ. ಅವರು ವರ್ಷದಲ್ಲಿ ೪ ಸಿಲಿಂಡರ್ ಮಾತ್ರ ಖರೀದಿಸುವ ಸಾಮರ್ಥ್ಯ ಪಡೆದಿದ್ದಾರೆ ಎಂದ ಮೇಲೆ ಅದು ಬಡತನವಲ್ಲವೆ?
ನೀತಿ ಆಯೋಗ ಬೇಕಿದ್ದರೆ ಶ್ರೀಮಂತರನ್ನು ಓಲೈಸಲಿ. ಬಡವರನ್ನು ಅವಹೇಳನ ಮಾಡುವುದು ಬೇಡ. ಬಡತನ ಮುಚ್ಚಿಡಬಹುದು. ಆದರೆ ಬಡವರನ್ನು ಮುಚ್ಚಿಡಲು ಸಾಧ್ಯವಿಲ್ಲ. ಅವರು ನಮ್ಮ ನಡುವೆ ಇದ್ದೇ ಇರುತ್ತಾರೆ. ಮೊದಲು ಬಡತನ ಶೇ. ೧೧.೨೭ ಇದೆ ಎಂದು ಹೇಳಲಾಗಿತ್ತು. ಈಗ ಇದು ಇದ್ದಕ್ಕಿದ್ದಂತೆ ಸರ್ಕಾರಿ ಲೆಕ್ಕದಲ್ಲಿ ಶೇ. ೫ಕ್ಕೆ ಇಳಿದುಬಿಟ್ಟಿದೆ. ಕೌಟುಂಬಿಕ ವೆಚ್ಚದ ಸಮೀಕ್ಷೆಯ ಪ್ರಕಾರ ಈ ನಿರ್ಧಾರಕ್ಕೆ ಬರಲಾಗಿದೆ. ಈ ಸಮೀಕ್ಷೆ ಆಗಸ್ಟ್ ೨೨ರಿಂದ ಜುಲೈ ೨೩ವರೆಗೆ ನಡೆದಿದೆ. ೮೭೨೩ ಗ್ರಾಮಗಳು ಮತ್ತು ೬೧೧೫ ನಗರ ವಾಸಿಗಳು ಮತ್ತು ೮೭೨೩ ಗ್ರಾಮೀಣ ವಾಸಿಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆ. ೨,೬೧,೭೪೫ ಮನೆಗಳನ್ನು ಇದಕ್ಕೆ ಪರಿಗಣಿಸಲಾಗಿದೆ. (ಗ್ರಾಮೀಣ ಶೇ. ೬೦ ನಗರ ಶೇ. ೪೦ ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ)ಈ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿದೆ ಎಂದು ಭಾವಿಸಿದರೂ ಇದರ ಪ್ರಕಾರ ಸಾಮಾನ್ಯ ಕುಟುಂಬದ ಸರಾಸರಿ ವೆಚ್ಚ ಶೇ. ೫೦ ರಷ್ಟು ಜನರದು ಗ್ರಾಮೀಣ ಭಾಗದಲ್ಲಿ ೩,೦೯೪ ರೂ. ನಗರದಲ್ಲಿ ೪,೯೬೩ ರೂ. ಕೆಳಹಂತದಲ್ಲಿ ಶೇಕಡ ೫೦ ರಷ್ಟು ಜನರ ಆದಾಯ ಗ್ರಾಮೀಣ ೧,೩೭೩ ರಿಂದ ೨,೧೧೨ ರೂ. ನಗರ ಪ್ರದೇಶದಲ್ಲಿ ೨,೦೦೧ ರಿಂದ ೩,೧೫೭ ರೂ. ಇದರ ಕೆಳಗೆ ಶೇ.೨೦ ರಷ್ಟು ಜನ ಇದ್ದಾರೆ. ಅವರ ಆದಾಯ ದಿನಕ್ಕೆ ೭೦ ರೂ. ನೀತಿ ಆಯೋಗದ ದೃಷ್ಟಿಯಲ್ಲಿ ಇವರು ಬಡವರಲ್ಲ. ಒಮ್ಮೆ ನೀತಿ ಆಯೋಗದ ಸದಸ್ಯರು ಈ ಹಣದಲ್ಲಿ ಒಂದು ತಿಂಗಳು ಬದುಕಿದರೆ ಬಡತನ ಏನು ಎಂಬುದು ತಿಳಿಯುತ್ತದೆ. ಈಗ ಗ್ರಾಮೀಣ ಮತ್ತು ನಗರದ ದಿನ ವೆಚ್ಚವನ್ನು ನೋಡಿದರೆ ವ್ಯತ್ಯಾಸ ಹೆಚ್ಚು ಕಂಡು ಬರುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲೂ ದಿನದ ನಿರ್ವಹಣೆ ದುರ್ಬರವಾಗುತ್ತಿದೆ. ಅದರಲ್ಲೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರ್ಗಗಳ ಪರಿಸ್ಥಿತಿಯನ್ನು ಆಯೋಗ ಪರಿಗಣಿಸಲು ಹೋಗಿಲ್ಲ. ಮೇಲ್ವರ್ಗದ ಜನರನ್ನು ನೋಡಿ ಬಡತನ ಇಳಿದಿದೆ ಎಂದು ಹೇಳುವುದು ಸಮಾಜಕ್ಕೆ ಅನ್ಯಾಯ ಮಾಡಿದಂತೆ.
ರಾಜ್ಯವಾರು ಅಂಕಿಅಂಶಗಳನ್ನು ನೋಡಿದರೆ ಇದು ತಿಳಿಯುತ್ತದೆ. ಛತ್ತೀಸಗಢ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮೇಘಾಲಯಗಳಲ್ಲಿ ಆದಾಯ ಮತ್ತು ವೆಚ್ಚ ಬೇರೆ ರಾಜ್ಯಗಳಿಗೆ ಹೋಲಿಸುವ ಮಟ್ಟದಲ್ಲೂ ಇಲ್ಲ.
ಈ ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಮತ್ತು ಬಿಜೆಪಿ ಆಡಳಿತದಲ್ಲಿದ್ದವು. ೧೯೯೫ ರಿಂದ ಗುಜರಾತ್‌ನಲ್ಲಿ ಬಿಜೆಪಿ ಇದೆ. ಅಲ್ಲಿಯೂ ಸರಾಸರಿ ಜೀವನ ವೆಚ್ಚ ಸರಾಸರಿ ಗ್ರಾಮೀಣ ಭಾಗದಲ್ಲಿ ೩೭೯೮-೩೭೭೩ ರೂ. ನಗರದಲ್ಲಿ ೬೮೨೧-೬೪೫೯ರೂ. ಆಗಿದೆ. ಬಡವರ ಮಾತು ಇರಲಿ. ಮಧ್ಯಮವರ್ಗದ ಗತಿ ಏನು?
ನೀತಿ ಆಯೋಗ ಸರ್ಕಾರದ ಸಾಧನೆಯ ಹೇಳುವ ಭರದಲ್ಲಿ ಬಡತನವನ್ನೇ ಮರೆಮಾಚಲು ಹೊರಟಿದೆ. ಇದರಿಂದ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ನೀತಿ ಆಯೋಗ ಇರುವುದು ನಿಜಾಂಶವನ್ನು ಜನರ ಮುಂದಿಡುವುದಕ್ಕೆ. ಸರ್ಕಾರ ಹೇಳದ ಸಂಗತಿಗಳನ್ನು ನೀತಿ ಆಯೋಗ ಹೇಳಬೇಕು. ಆಗಲೇ ಆಯೋಗದ ವರದಿಗೆ ಬೆಲೆ ಬರುತ್ತದೆ.