ನೀನೇ ನಾನು ನಾನೇ ನೀನು!

Advertisement

ಸಿನಿಮಾ ಶುರುವಾಗುವುದೇ ಒಂದು ಕೊಲೆಯ ತನಿಖೆಯಿಂದ. ವಿಚಾರಣೆ ಸಾಗುತ್ತಾ, ಸಮಯ ಕಳೆಯುತ್ತಾ, ಕೊಲೆ ಒಂದಲ್ಲ… ಎರಡು ಎಂಬುದು ಪೊಲೀಸ್ ಅಧಿಕಾರಿಯ ಗಮನಕ್ಕೆ ಬರುತ್ತದೆ. ಅಲ್ಲಿವರೆಗೂ ಮಂದಗತಿಯಲ್ಲಿ ಸಾಗುತ್ತಿದ್ದ ತನಿಖೆ, ತೀವ್ರಗತಿ ಪಡೆದುಕೊಳ್ಳುತ್ತದೆ. ಮಧ್ಯಂತರದ ಹೊತ್ತಿಗೆ ಎರಡೂ ಕೊಲೆಯನ್ನು ಮಾಡಿರೋದು ಒಬ್ಬರೇನಾ ಎಂಬ ಸಂಶಯ ಶುರುವಾಗುತ್ತದೆ..!
ಮೊದಲಾರ್ಧದಲ್ಲಿ ಕಥೆಯ ಗುಟ್ಟು ಬಿಟ್ಟು ಕೊಡದೇ ಪಾತ್ರಧಾರಿಗಳನ್ನು ಪರಿಚಯಿಸುತ್ತಾ, ಒಂದೊಂದೇ ಅಧ್ಯಾಯ' ತರೆದಿಡುತ್ತಾರೆ ನಿರ್ದೇಶಕ ವಿಶಾಲ್ ಅತ್ರೇಯ. ಅಷ್ಟರೊಳಗೆಕೊಲೆಗಾರ ಇವರೇ…’ ಎಂದು ನಿರ್ಧಾರಕ್ಕೆ ಬರುವುದು ಕಷ್ಟ. ಅಂತದ್ದೊಂದು ಟ್ವಿಸ್ಟ್ ಕೊಟ್ಟು, ಒಂದು ಸಣ್ಣ ಬ್ರೇಕ್ ಕೊಡುತ್ತಾರೆ. ಅಲ್ಲಿಗೆ ಕೊಲೆ ಮಾಡಿದವರಿಗೂ ರಿಲ್ಯಾಕ್ಸ್… ಪ್ರೇಕ್ಷಕರಿಗೂ…
ದ್ವಿತೀಯಾರ್ಧದಲ್ಲಿ ಇಡೀ ಸಿನಿಮಾಕ್ಕೆ ಹೊಸ ತಿರುವು ಸಿಗುತ್ತದೆ. ಫಸ್ಟ್ ಹಾಫ್‌ನಲ್ಲಿದ್ದ ಕೆಲವೊಂದು ಸಂಶಯಗಳಿಗೆ ಸೆಕೆಂಡ್ ಹಾಫ್‌ನಲ್ಲಿ ಉತ್ತರ
ಸಿಗುತ್ತಾ ಹೋಗುತ್ತದೆ. ಅದಾಗ್ಯೂ ಕೆಲವೊಂದು ಕ್ಲಿಷ್ಟಕರವಾದ ಸಿಗ್ಗುಗಳು ಸಿನಿಮಾ ಅಂತ್ಯದವರೆಗೂ ಇದ್ದೇ ಇರುತ್ತದೆ. ಅದನ್ನು ಜಾಣ್ಮೆಯಿಂದ ಬಿಡಿಸುವಲ್ಲಿ ವಿಶಾಲ್ ಸಫಲರಾಗಿದ್ದಾರೆ.
ಕೊನೆಗೂ ಕೊಲೆಗಾರರ ರಹಸ್ಯ ಬಯಲಾಗುತ್ತಾ..? ಸುಳ್ಳಿನ ಸರಮಾಲೆಯನ್ನೇ ಕಟ್ಟಿದ್ದ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪೊಲೀಸ್ ಅಧಿಕಾರಿಯ ಪ್ರಯತ್ನ ಸಫಲವಾಗುತ್ತಾ… ನೀನೇ ನಾನು, ನಾನೇ ನೀನು..! ಎಂಬ ಗೊಂದಲಕ್ಕೆ ಉತ್ತರ ಸಿಗುತ್ತಾ ಎಂಬುದಕ್ಕೆ ಸಿನಿಮಾದಲ್ಲಿ ಉತ್ತರವಿದೆ. ವಿಶೇಷವೆಂದರೆ, ಈ ಕೇಸ್‌ನ ಜತೆಗೆ ಮತ್ತೊಂದು ಕೇಸ್ ಸಹ ಸೇರಿಕೊಳ್ಳುತ್ತದೆ. ಅದು ಮುಂದಿನ ಭಾಗಕ್ಕೆ ಸೀಮಿತ. ಅದಕ್ಕೆಂದೇ ಇಲ್ಲಿ ಲೀಡ್ ಕೊಡಲಾಗಿದೆ.
ಇವೆಲ್ಲವೂ ಚಿತ್ರದ ಕಥಾ ಸಾರಾಂಶವಾದರೆ, ಇಡೀ ಸಿನಿಮಾವನ್ನು ಕುತೂಹಲಕಾರಿ ಪಯಣವಾಗಿಸಲು ತಾರಾಗಣ ಹಾಗೂ ತಾಂತ್ರಿಕ ಬಳಗ ಸಾಕಷ್ಟು ಶ್ರಮವಹಿಸಿದೆ ಎಂಬುದು ಪ್ರತಿಯೊಂದು ದೃಶ್ಯದಲ್ಲೂ ಎದ್ದು ಕಾಣುತ್ತದೆ. ಮೇಘನಾ ರಾಜ್ ಸರ್ಜಾ ಹಾಗೂ ಪ್ರಜ್ವಲ್ ದೇವರಾಜ್, ದೃಶ್ಯದಿಂದ ದೃಶ್ಯಕ್ಕೆ ಕೌತುಕತೆಯನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಮೇಘನಾ ಮತ್ತು ಪ್ರಜ್ವಲ್ ಪಾತ್ರಕ್ಕೆ ಬೇಕಾದ ತನ್ಮಯತೆ ಕಾಪಾಡಿಕೊಂಡಿರುವುದರಿಂದ, ಸಿನಿಮಾದ ತೂಕ ಹೆಚ್ಚಿಸಿದೆ.
ಇದೊಂದು ಕ್ರೈಂ ಥ್ರಿಲ್ಲರ್ ಮಾದರಿಯಲ್ಲಿದ್ದರೂ, ಅಲ್ಲಲ್ಲಿ ತಿಳಿಹಾಸ್ಯ, ಸೆಂಟಿಮೆಂಟ್‌ಗೂ ಜಾಗ ಮಾಡಿ ಕೊಡಲಾಗಿದೆ. ಹಿನ್ನೆಲೆ ಸಂಗೀತದ ಮೂಲಕವೇ ಗಮನ ಸೆಳೆಯುತ್ತಾ, ಹಾಡುಗಳಿಲ್ಲವೆಂಬ ಕೊರತೆ ನೀಗಿಸಿದ್ದಾರೆ ವಾಸುಕಿ ವೈಭವ್.