ನೀರು ಬಿಡದಿದ್ದರೆ, ಸರ್ಕಾರವನ್ನೇ ವಜಾ ಮಾಡಬಹುದೇ?

Advertisement

ಬೆಂಗಳೂರು: ನೀರು ಕೊಡಬಾರದೆಂಬುದು ನಮ್ಮ ನಿಲುವು. ಅಂತಹ ನಿರ್ಧಾರ ಕೈಗೊಂಡರೆ ಏನಾಗಬಹುದೆಂಬ ಬಗ್ಗೆ ಚರ್ಚೆ ಮಾಡುತ್ತೇವೆ. ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬಹುದೇ? ನ್ಯಾಯಾಂಗ ನಿಂದನೆ ಆಗಬಹುದೇ? ಸರ್ಕಾರವನ್ನೇ ವಜಾ ಮಾಡಬಹುದೇ? ಈ ಎಲ್ಲ ಪರಿಣಾಮಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ಹೇಳಿದ್ದಾರೆ.
ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಇಂದು ಸಂಜೆ ಕಾನೂನು ಮತ್ತು ನೀರಾವರಿ ತಜ್ಞರ ತಂಡದ ಜತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ರಚನೆ ಮಾಡಿದೆ. ಅವುಗಳು ವಾಸ್ತವ ಸ‍್ಥಿತಿಯ ಅವಲೋಕನ ಮಾಡಿ ತನ್ನ ಅಭಿಪ್ರಾಯವನ್ನು ನೀಡುತ್ತವೆ. ನಾವು ತಮಿಳುನಾಡಿಗೆ ಹರಿಸುವ ನೀರನ್ನು ಬಿಳಿಗುಂಡ್ಲುವಿನಲ್ಲಿ ಕೇಂದ್ರ ಜಲ ಆಯೋಗದ ಸುಪರ್ದಿಯಲ್ಲಿರುವ ಜಲಮಾಪನ ಕೇಂದ್ರ ಲೆಕ್ಕ ಹಾಕುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕೆಂದು ಆದೇಶವಿದೆ. ನಮ್ಮ ರಾಜ್ಯಕ್ಕೆ 284.85 ಟಿಎಂಸಿ ನೀರು ಅಗತ್ಯವಿದೆ. ಆದರೆ ಸಂಕಷ್ಟ ಕಾಲದಲ್ಲಿ ನೀರು ಹೇಗೆ ಹಂಚಿಕೊಳ್ಳುವ ಸೂತ್ರವನ್ನು ಸುಪ್ರೀಂಕೋರ್ಟ್ ಇಲ್ಲವೆ ಪ್ರಾಧಿಕಾರ ಸಿದ್ಧಪಡಿಸಿಲ್ಲ ಎಂದರು
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್‌ಗಳೊಂದಿಗೆ ಇಂದು ಸಂಜೆ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು.