ನೂರು ದಿನಗಳ ಆಡಳಿತ ಗ್ಯಾರಂಟಿ ಜಾರಿಯಷ್ಟೇ ಖಚಿತ

ಸಂಪಾದಕೀಯ
Advertisement

ಹೊಸ ಸರ್ಕಾರ ೫ ವರ್ಷಗಳಲ್ಲಿ ೧೦೦ ದಿನ ಕಳೆದಿದೆ. ಇದೇನೂ ದೊಡ್ಡ ಸಂಗತಿ ಏನಲ್ಲ. ೫ ಗ್ಯಾರಂಟಿಯನ್ನು ಪೂರೈಸುವುದರಲ್ಲಿ ಸರ್ಕಾರ ನಿರತವಾಗಿದೆ. ಜನರಂತೂ ಗ್ಯಾರಂಟಿಗಳಿಂದ ಸಂತೋಷವಾಗಿದ್ದಾರೆ.ಮುಂದಿನ ದಿನಗಳು ಹೇಗೆ ಎಂಬುದು ತಿಳಿಯದು.

ರಾಜ್ಯದಲ್ಲಿ ಹೊಸ ಸರ್ಕಾರ ಬಂದು ೧೦೦ ದಿನ ಕಳೆದಿದೆ. ೫ ಗ್ಯಾರಂಟಿಗಳಿಂದ ಉಚಿತ ಸೇವೆ ಪಡೆಯುತ್ತಿರುವ ಜನಸಾಮಾನ್ಯರು ಮಾತ್ರ ಸಂತೋಷವಾಗಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದ ಮೇಲೆ ರಾಜ್ಯದ ಎಲ್ಲ ತೀರ್ಥಕ್ಷೇತ್ರಗಳಲ್ಲಿ ಜನವೋ ಜನ. ದೇವಾಲಯದ ಹುಂಡಿಗಳು ತುಂಬಿ ತುಳುಕಾಡುತ್ತಿವೆ. ೫ ಗ್ಯಾರಂಟಿಗಳಿಗಾಗಿ ೫೮ ಸಾವಿರ ಕೋಟಿ ರೂ. ಅಗತ್ಯ. ಇದರಿಂದ ಬೇರೆ ಕಾಮಗಾರಿಗಳಿಗೆ ಹಣವಿಲ್ಲ. ಯಾವ ದೀರ್ಘಕಾಲಿಕ ಯೋಜನೆಯನ್ನೂ ಕೈಗೊಳ್ಳಲು ಸಾಧ್ಯವಿಲ್ಲ. ಜನ ಗ್ಯಾರಂಟಿ ಯೋಜನೆಗಳಿಗೆ ಮತ ಕೊಟ್ಟಿದ್ದಾರೆ. ಅದರಂತೆ ನಡೆದುಕೊಂಡಿದ್ದೇವೆ. ಉಳಿದದ್ದು ಮುಂದಿನ ಚುನಾವಣೆಯಲ್ಲಿ ಕೊಡುವ ಜನಾದೇಶವನ್ನು ಅವಲಂಬಿಸಿರುತ್ತದೆ ಎಂಬುದು ಆಡಳಿತ ವರ್ಗದ ವಾದ ಇದ್ದಂತಿದೆ. ಆಡಳಿತ ಪಕ್ಷಕ್ಕೆ ಸೇರಿದ ೧೩೫ ಶಾಸಕರಿಗೆ ಮಾತ್ರ ತೀವ್ರ ಪರದಾಟ. ತಮ್ಮ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಹಣವಿಲ್ಲ. ಬರಗಾಲ ಕಾಲಿಡುತ್ತಿದೆ. ಕುಡಿಯುವ ನೀರು ಒದಗಿಸಲು ಹಣ ಬೇಕು. ಸರ್ಕಾರ ಶಾಸಕರಿಗೆ ಕೈ ಅಲ್ಲಾಡಿಸಿ ಆಗಿದೆ. ಅಬ್ಕಾರಿಯಿಂದ ಹೆಚ್ಚು ಹಣ ಬರಬಹುದು ಎಂದು ನಿರೀಕ್ಷೆಯಾಗಿತ್ತು. ಪಾನಪ್ರಿಯರು ಈಗ ಕಡಿಮೆ ಕುಡಿಯಲು ಆರಂಭಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆ ನಿರೀಕ್ಷೆಯೂ ಸಂಪೂರ್ಣ ಕೈಗೂಡದು.
ಇದುವರೆಗೆ ಹಳೆ ಸರ್ಕಾರದ ಅಕ್ರಮಗಳನ್ನು ಜನರ ಮುಂದಿಟ್ಟು ಕಾಲ ಕಳೆಯಲು ಸಾಧ್ಯವಾಗಿತ್ತು. ಕೊರೊನಾ ಕಾಲದ ಅಕ್ರಮ ಮತ್ತು ಕಾಮಗಾರಿಗಳಲ್ಲಿ ಶೇ.೪೦ ರಷ್ಟು ಕಮಿಷನ್ ಅರೋಪದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮುರ್ತಿಗಳನ್ನು ನೇಮಿಸಲಾಗಿದೆಯೇ ಹೊರತು ನ್ಯಾಯಾಂಗ ತನಿಖೆ ಏನಲ್ಲ. ಅದರಿಂದ ಸಮಿತಿ ವರದಿಗೆ ಹೈಕೋರ್ಟ್ ಕವಡೆ ಕಾಸು ಕಿಮ್ಮತ್ತು ಕೊಡೋಲ್ಲ.
ಇವುಗಳ ನಡುವೆ ಬಿಜೆಪಿಯಲ್ಲಿ ಸೋತವರು ಮತ್ತೆ ತವರುಮನೆ ಎಂದು ಹುಡುಕಿಕೊಂಡು ಬರಲು ಆರಂಭಿಸಿದ್ದಾರೆ. ಅಲ್ಲಿ ಏನೂ ಸಿಗುವುದಿಲ್ಲ ಎಂದು ಖಾತ್ರಿಯಾದ ಮೇಲೆ ಕೈ ಪಾಳೆಯದ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಕೈಪಾಳೆಯದಲ್ಲಿರುವವರು ಹಸಿದು ಕಾಯುತ್ತಿದ್ದಾರೆ. ಅವರಿಗೆ ಬೇರೆಯವರು ಬರುವುದು ಬೇಕಿಲ್ಲ. ಇದರಿಂದ ಶೀತಲ ಸಮರ ಆರಂಭಗೊಳ್ಳಬಹುದು. ಜನ ೫ ವರ್ಷಗಳಿಗೆ ಆದೇಶ ನೀಡಿದ್ದರೂ ಸರ್ಕಾರದ ಅಡಳಿತ ಗುರಿ ಮುಂದಿನ ಲೋಕಸಭೆ ಚುನಾವಣೆ ಆಗಿದೆ. ಅದೊಂದು ಮೈಲಿಗಲ್ಲು. ಅದರಲ್ಲಿ ವಿಜೇತರಾದರೆ ಸಾಕು. ಆಮೇಲೆ ನೋಡಿಕೊಳ್ಳೋಣ ಎಂಬ ಧೋರಣೆ ಇರುವುದರಿಂದ ಅಧಿಕಾರಿಗಳು ದೀರ್ಘಕಾಲಿಕ ಯೋಜನೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರ ನಡುವೆ ಕಾವೇರಿ ವಿವಾದ ತಲೆ ಎತ್ತಿದೆ. ಕೃಷ್ಣಾ ನದಿ ಬಳಕೆಯ ಚಿಂತನೆ ನಡೆದಿಲ್ಲ.
ಮುಂದಿನ ಲೋಕಸಭೆ ಚುನಾವಣೆ ಪ್ರತಿಪಕ್ಷದವರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಅಧಿಕಾರಕ್ಕಾಗಿ ಬಂದವರು ಹಿಂತಿರುಗಲು ಹವಣಿಸುತ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಉಳಿಯುವವರು ಯಾರು, ಹೊರ ಹೋಗುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಇವುಗಳ ನಡುವೆ ಅಗತ್ಯವಸ್ತುಗಳ ಬೆಲೆ ದ್ವಿಗುಣಗೊಂಡಿದೆ. ಅದನ್ನು ನಿಯಂತ್ರಿಸಬೇಕಾದ ಸರ್ಕಾರ ತನಗೆ ಸಂಬಂಧವಿಲ್ಲ ಎಂದು ಭಾವಿಸಿ ಮೌನವಹಿಸಿದೆ. ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದರೆ ನಮ್ಮ ಕೆಲಸ ಮುಗಿಯಿತು ಎಂಬ ಧೋರಣೆ ಕಂಡು ಬರುತ್ತಿದೆ. ಈ ರೀತಿ ಕಳೆದು ಹೋಗಿರುವ ೧೦೦ ದಿನಗಳು ಮುಂದಿನ ದಿನಗಳಲ್ಲಿ ಹೇಗಿರುತ್ತದೆ ಎಂದು ಹೇಳುವುದು ಕಷ್ಟ. ಮುಖ್ಮಮಂತ್ರಿ ಹಲವು ಬಾರಿ ಹಸಿವು ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರೆ ಆ ಗುರಿ ತಲುಪಲು ಇನ್ನೂ ಸಾಧಿಸಬೇಕಾಗಿರುವುದು ಬಹಳ ಇದೆ. ಹಸಿವು ಕಡಿಮೆ ಮಾಡುವುದರಲ್ಲಿ ತಮಿಳುನಾಡು ಮತ್ತು ಕೇರಳ ನಮಗಿಂತ ಬಹಳ ಮುಂದಿದೆ. ರಾಷ್ಟ್ರೀಯ ಸರಾಸರಿಗಿಂತ ನಮ್ಮ ಹಸಿವು ಸೂಚ್ಯಂಕ ಹೆಚ್ಚಾಗಿದೆ. ಗ್ರಾಮೀಣ ಜನ ಮುಗಿಲು ನೋಡುತ್ತಿದ್ದರೆ,. ರಾಜ್ಯ ಸರ್ಕಾರ ಕೇಂದ್ರದತ್ತ ನೋಡುತ್ತ ಕುಳಿದಿದೆ. ಕೇಂದ್ರದ ಸ್ಪಂದನೆ ಬಗ್ಗೆ ಯಾವ ಭರವಸೆಯಂತೂ ಇಲ್ಲ. ೧೦೦ ದಿನ ಕಳೆದಿದೆ. ನೂರಾರು ಚಿಂತೆಗಳು ಕಾಡುತ್ತಿವೆ.