ನೇರವಾಗಿ ರಾಜಕಾರಣ ಮಾಡುವ ಎದೆಗಾರಿಕೆ ಯಡಿಯೂರಪ್ಪ ಅವರಿಗೆ ಇದೆ

vijayendra
Advertisement

ಗದಗ: ಪಕ್ಷ ನನಗೆ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದೆ. ಯಡಿಯೂರಪ್ಪ ಅವರ ಮಗ ಅನ್ನುವ ಬಗ್ಗೆ ನನಗೆ ಹೆಮ್ಮೆಯಿದೆ. ಬಿಎಸ್‌ವೈ ಮಗ ಅನ್ನುವ ಕಾರಣಕ್ಕೆ ಕಾರ್ಯಕರ್ತರು ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಗದಗದಲ್ಲಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದೇನೆ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ವಿಜಯೇಂದ್ರಗೆ ಹಿನ್ನೆಡೆ ಅಗಿದೆ ಅನ್ನುವುದು ಸತ್ಯಕ್ಕೆ ದೂರವಾದ ಮಾತು. ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್‌ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುವ ಕೆಲಸ ನಡೆಯುತ್ತಿದೆ. ಪ್ರತಿಪಕ್ಷದವರೂ ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತಾನಾಡಿದ್ದಾರೆ. ಅದೇ ರೀತಿ ಜನಾರ್ದನ್‌ ರೆಡ್ಡಿ ಅವರೂ ಕೂಡ ಒಳ್ಳೆಯ ಮಾತಾನಾಡಿದ್ದಾರೆ ಎಂದರು.
ಇದರ ಅರ್ಥ ಜನರ್ದನ್‌ ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರ ಬೆಂಬಲ ಇದೆ ಅಂತಲ್ಲ. ಯಡಿಯೂರಪ್ಪ ಅವರು ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ. ನೇರವಾಗಿ ರಾಜಕಾರಣ ಮಾಡುವ ಎದೆಗಾರಿಕೆ ಯಡಿಯೂರಪ್ಪ ಅವರಿಗೆ ಇದೆ. ಪಕ್ಷ ಕರೆದ ಸಭೆಗೆ ಹಾಜರಾಗಬೇಕಾಗಿದ್ದು ನನ್ನ ಕರ್ತವ್ಯವಾಗಿದೆ. ಕಾರಣಾಂತರಗಳಿಂದ ಸರಿಯಾದ ಸಮಯಕ್ಕೆ ತಲುಪಲಾಗಲಿಲ್ಲ. ಯಡಿಯೂರಪ್ಪ ಅವರ ವಿದೇಶ ಪ್ರವಾಸ ಪೂರ್ವ ನಿಯೋಜಿತವಾಗಿದೆ. ಅಮಿತ್ ಶಾ ಅವರ ಕಾರ್ಯಕ್ರಮ ವಾರದ ಹಿಂದೆ ತೀರ್ಮಾನ ಆಗಿತ್ತು. ಯಡಿಯೂರಪ್ಪ ಅವರು ಅಮಿಶಾ ಜೊತೆ ದೂರವಾಣಿಯಲ್ಲಿ ಮಾತಾನಾಡಿದ್ದಾರೆ. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲ. ಯಡಿಯೂರಪ್ಪ ಸಂತೋಷದಿಂದ ಪಕ್ಷ ಸಂಘಟನೆಯಲ್ಲಿದ್ದಾರೆ. ರಾಜ್ಯ, ದೇಶದಲ್ಲಿ ಇಷ್ಟು ವರ್ಷ ಯಾರು ಅಧಿಕಾರದಲ್ಲಿದ್ದರು ಅನ್ನುವುದು ಜನರಿಗೆ ಗೊತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.