ನೇಹಾ, ಅಂಜಲಿ ಹತ್ಯೆಯ ಮಾಹಿತಿ ಪಡೆದ ಸಿಐಡಿ ಡಿಜಿಪಿ

Advertisement

ಹುಬ್ಬಳ್ಳಿ: ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳ ಕುರಿತು ಸಿಐಡಿ ಸಮಗ್ರವಾಗಿ ತನಿಖೆ ನಡೆಸುತ್ತಿದೆ ಎಂದು ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಹೇಳಿದರು.
ಸೋಮವಾರ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಮಾಧ್ಯಮದವರಿಗೆ ಇಷ್ಟೇ ವಿಷಯ ತಿಳಿಸಿ ಮುನ್ನಡೆದರು.
ಸಂಜೆ ೫:೧೫ರ ಹೊತ್ತಿಗೆ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಅವರು ಇವೆರಡು ಹತ್ಯೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಸಿಐಡಿ ಎಸ್‌ಪಿ ಎನ್. ವೆಂಕಟೇಶ ಹಾಗೂ ಅಧಿಕಾರಿಗಳಿಂದ ಒಂದು ತಾಸು ತನಿಖೆಯ ಹಂತ ಹಾಗೂ ಸಮಗ್ರ ಮಾಹಿತಿಯನ್ನು ಪಡೆದರು.
ಏ. ೧೮ರಂದು ಪ್ರಿಯಕರ ಫಯಾಜ್ ಎಂಬಾತನಿಂದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ನಡೆದಿತ್ತು. ಎರಡು ವಾರಗಳ ಹಿಂದೆ ನಗರದ ವೀರಾಪುರ ಓಣಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಹತ್ಯೆಯಾಗಿತ್ತು. ಈ ಎರಡೂ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಅಂಜಲಿ ಹತ್ಯೆ ಆರೋಪಿ ಗಿರೀಶ ಸಾವಂತನನ್ನು ದೇಶಪಾಂಡೆನಗರ ಸರ್ಕ್ಯೂಟ್ ಹೌಸ್ ಕರೆತರಲಾಗಿತ್ತು. ಆದರೆ, ಸಿಐಡಿ ಡಿಜಿಪಿ ಡಾ. ಎಂ.ಎ. ಸಲೀಂ ಎದುರು ಆತನನ್ನು ಹಾಜರುಪಡಿಸಲಿಲ್ಲ.
ಬಳಿಕ ವೀರಾಪುರ ಓಣಿಯ ಅಂಜಲಿ ನಿವಾಸಕ್ಕೆ ಭೇಟಿ ನೀಡಿದ ಡಿಜಿಪಿ, ಕುಟುಂಬಸ್ಥರಿಂದ ಮಾಹಿತಿ ಪಡೆದರು.
ಮೃತ ನೇಹಾ ಹಿರೇಮಠ ಅವರ ಬೀಡನಾಳದ ನಿವಾಸಕ್ಕೆ ಬುಧವಾರ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರು ನಿರಂಜನ ಹಿರೇಮಠ ಅವರಿಂದ ಹೆಚ್ಚಿನ ಮಾಹಿತಿ ಪಡೆಯುವ ಸಾಧ್ಯತೆ ಇದೆ.