ನೇಹಾ ಹತ್ಯೆ ಪ್ರಕರಣ: ಫಯಾಜ್ ಮತ್ತೆ ನ್ಯಾಯಾಂಗ ಬಂಧನಕ್ಕೆ

Advertisement

ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಮಾಡಿದ ಆರೋಪಿ ಫಯಾಜ್‌ನನ್ನು ಸಿಐಡಿ ಪೊಲೀಸರು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮತ್ತೆ ೧೪ ದಿನ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.
ನೇಹಾ ಹಿರೇಮಠ ಹತ್ಯೆಯಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣದ ಗಂಭೀರತೆ ಅರಿತು ಸರಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡದ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ಆರೋಪಿ ಫಯಾಜ್‌ನನ್ನು ಕೋರ್ಟ್ ಅನುಮತಿ ಮೇರೆಗೆ ೬ ದಿನ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದರು. ಮಂಗಳವಾರಕ್ಕೆ ಆರು ದಿನ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಮರಳಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನ್ಯಾಯಾಲಯ ಆರೋಪಿಯ ನ್ಯಾಯಾಂಗ ಬಂಧನವನ್ನು ೧೪ ದಿನ ವಿಸ್ತರಣೆ ಮಾಡಿದೆ.