ನೈತಿಕ ಪೊಲೀಸ್ ಗಿರಿಗೆ ಪೊಲೀಸರಿಂದ ಕ್ರಮ

Advertisement

ಮಂಗಳೂರು: ನೈತಿಕ ಪೊಲೀಸ್ ಗಿರಿ ನಡೆದಲ್ಲಿ ಪರಿಶೀಲಿಸಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಬಗ್ಗೆ ಕಾನೂನು ಕ್ರಮದ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಯಾರೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು. ಶಾಂತಿ ಸಹಕಾರ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಇತ್ತೀಚಿಗೆ ದ.ಕ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲವೂ ಸರಿಯಾಗಿದೆ. ಒಂದೆರಡು ಹತ್ಯೆ ಪ್ರಕರಣಗಳು ಬಿಟ್ಟರೆ ಮತ್ತೆಲ್ಲವೂ ಆ ಮಟ್ಟದಲ್ಲಿ ಯಾವುದೂ ನಡೆದಿಲ್ಲ ಎಂದರು.
ಸಲಾಂ ಆರತಿ ನಿಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಸರಿಯಿದೆ. ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಅದೆಲ್ಲವೂ ಆಗಿದೆ. ಅದನ್ನು ಬದಲಾಯಿಸಬೇಕು. ಕನಿಷ್ಠ ದೇವಾಲಯಗಳಲ್ಲಿ ನಮ್ಮ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಯಾಗಬೇಕಾದ ಕೆಲಸ ಆಗದಿದ್ದಲ್ಲಿ ಮತ್ತೆ ಎಲ್ಲಿ ಆಗಬೇಕು ಎಂದು ಪ್ರಶ್ನಿಸಿದರು.