ನೋಟಿಸ್ ನೀಡಲಿ, ಎಲ್ಲವನ್ನೂ ಬಹಿರಂಗ ಮಾಡುವೆ

ಯತ್ನಾಳ
Advertisement

ವಿಜಯಪುರ: ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಕೋವಿಡ್ ಕಾಲಘಟ್ಟದಲ್ಲಿ ೪೦ ಸಾವಿರ ಕೋಟಿ ರೂ.ಗಳಷ್ಟು ದೊಡ್ಡಮಟ್ಟದ ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಸತ್ಯವನ್ನು ಹೇಳಲು ನನಗೆ ಭಯವಿಲ್ಲ, ಬೇಕಾದರೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಿ, ನೋಟಿಸ್ ನೀಡಲಿ, ಎಲ್ಲವನ್ನೂ ಬಹಿರಂಗ ಮಾಡುವೆ ಎಂದು ಗುಡುಗಿದ್ದಾರೆ.
ನನಗೆ ಲೂಟಿ ಮಾಡುವ ಚಟ ಇಲ್ಲ, ಕೊರೊನಾ ವೇಳೆ ೪೦ ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ. ೪೫ ರೂಪಾಯಿ ಒಂದು ಮಾಸ್ಕ್ಕ್ಗೆ ೪೮೫ ರೂಪಾಯಿ ಬಿಲ್ ಹಾಕಲಾಗಿದೆ. ಕೋವಿಡ್ ಬೆಡ್‌ನಲ್ಲೂ ಅವ್ಯವಹಾರ ಮಾಡಲಾಗಿದೆ. ಕಳ್ಳರು ಕಳ್ಳರೇ ಎಂದರು.
ನನಗೂ ಕೋವಿಡ್ ಆಗಿತ್ತು. ಆ ವೇಳೆ ನನಗೂ ೫.೮೦ ಲಕ್ಷ ರೂ. ಬಿಲ್ ಮಾಡಲಾಗಿತ್ತು ಎಂದು ದೂರಿದರು.
ಬಿಎಸ್‌ವೈ ಚೇಲಾಗಳಿಗೆ ಸ್ಥಾನಮಾನ
ವಿರೋಧ ಪಕ್ಷದ ಜವಾಬ್ದಾರಿ ಹಂಚಿಕೆ ವಿಷಯವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಬಿ.ಎಸ್.ವೈ. ಚೇಲಾಗಳಿಗೆ ಸ್ಥಾನಮಾನ ನೀಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕೆಲವು ನಾಯಕರಿಗೆ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡಲಾಗಿದೆ. ಕೆಲಸಕ್ಕೆ ಬಾರದ ಸ್ಥಾನ ನೀಡಿದ್ದಾರೆ, ತ್ಯಾಗ ಎಂದರೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕಿತ್ತು, ಇಡೀ ಲಿಂಗಾಯತ, ಪಂಚಮಸಾಲಿಗೆ ಮೂಗಿಗೆ ತುಪ್ಪ ಒರೆಸಿದ್ದಾರೆ ಎಂದರು.