ನ್ಯಾಯಾಂಗ ಚಿತ್ತ- ಇದು ಹೊಸ ಬೆಳಕಿನ ತುಡಿತ

Advertisement

ಕೋರ್ಟ್ ಕಟ್ಲೆ ಎಂದರೆ ಸೋತವ ಸತ್ತ. ಗೆದ್ದವ ದಿವಾಳಿಯಾದ. ಬದುಕಿಯೂ ಸತ್ತಂತಾದ ಎನ್ನುವ ಮಾತು ಇಂದು ನೆನ್ನೆಯದ್ದಲ್ಲ. ನ್ಯಾಯಾಂಗ ವ್ಯವಸ್ಥೆ ಅಥವಾ ನ್ಯಾಯದಾನ ವ್ಯವಸ್ಥೆ ಪದ್ಧತಿ ಎಂದು ಆರಂಭವಾಯಿತೋ ಅಂದಿನಿಂದಲೂ ಈ ಮಾತು ಪ್ರಚಲಿತ.
ಬಹುಶಃ ಇದು ನ್ಯಾಯಕ್ಕಿಂತಲೂ ಸತ್ಯ ಮತ್ತು ವಾಸ್ತವ. ನ್ಯಾಯ, ಕಾಯ್ದೆ, ಕಾನೂನು ಕಟ್ಟಲೆ ಬಗ್ಗೆ ಜನರಿಗಿರುವ ಅಜ್ಞಾನ ಮತ್ತು ಭಯ. ವಕೀಲರು ನ್ಯಾಯ ಒದಗಿಸುತ್ತಾರೆ, ತಮಗೆ ಪ್ರಕರಣದಲ್ಲಿ ಗೆಲುವು ತಂದುಕೊಡುತ್ತಾರೆ ಎಂಬ ನಂಬಿಕೆ ಜನಸಾಮಾನ್ಯರದ್ದು
ಹಾಗೆಯೇ ತಮಗೇ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಕೂಡ ಪ್ರತಿಯೊಬ್ಬರದ್ದು. ಹಾಗಂತ ಈ ನ್ಯಾಯದ ಪ್ರಕ್ರಿಯೆ, ನ್ಯಾಯದಾನದ ಮತ್ತು ಕಾನೂನು ಕಟ್ಟಲೆಗಳ ಬಗ್ಗೆ ಇರುವ ಅಜ್ಞಾನ ಇದೇ ಒಟ್ಟಾರೆ ಪ್ರಕ್ರಿಯೆಯ ಬಂಡವಾಳವಾಗಿದೆ. ಹಾಗಾಗಿಯೇ ಗೆದ್ದವ ಅರೆಜೀವವಾದ. ಸೋತವ ಸತ್ತ ಎನ್ನುವ ಮಾತು.
ಇದಕ್ಕೆ ಕಾರಣ ಜನಸಾಮಾನ್ಯರೆಲ್ಲರಲ್ಲೂ ಇರುವ ಕಾಯ್ದೆ- ಕಾನೂನು ಹಾಗೂ ನ್ಯಾಯದಾನದ ಬಗ್ಗೆ ಇರುವ ಅಜ್ಞಾನ. ವಕೀಲರನ್ನು ನೇಮಿಸಿದರಾಯಿತು. ನಮಗೆ ಅವರು ನ್ಯಾಯ ಕೊಡಿಸುತ್ತಾರೆ ಎನ್ನುವ ವಿಶ್ವಾಸದಿಂದಲೇ ಇಡೀ ನ್ಯಾಯಾಂಗ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿಯೇ ಹಲವು ಲೋಪದೋಷಗಳ ಜೊತೆಗೆ, ಕಕ್ಷಿದಾರನ ಅಜ್ಞಾನವೇ ಬಹುತೇಕ ನ್ಯಾಯವಾದಿಗಳ ಬಂಡವಾಳ. ಅದರಲ್ಲೂ ಕೆಳ ಹಂತದಲ್ಲಿ ನ್ಯಾಯದಾನ ಪ್ರಕ್ರಿಯೆ ಜಟಿಲತೆಗಳು, ಭಯದ ಅಂಚಿನಲ್ಲಿಯೇ ಸಾಗುತ್ತಿರುವುದರಿಂದ ಅದೇ ದೊಡ್ಡ ಆಸ್ತಿ.
ಈಗೊಂದು ಹೊಸ ಬೆಳಕು ಮೂಡುತ್ತಿದೆ. ಏನೆಂದರೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವೈ.ವಿ ಚಂದ್ರಚೂಡ ಅವರು ನ್ಯಾಯಾಲಯದ ತೀರ್ಪುಗಳು ಮತ್ತು ವಾದಗಳು ಪ್ರಾದೇಶಿಕ ಭಾಷೆಗಳಲ್ಲಿಯೂ ತರ್ಜುಮೆಗೊಂಡು ಜನಸಾಮಾನ್ಯರಿಗೆ ಲಭ್ಯವಾಗಬೇಕು ಎಂಬ ಸಲಹೆ ಮಂಡಿಸಿದ್ದಾರೆ. ಈ ತೀರ್ಪುಗಳ ತರ್ಜುಮೆಗೆ ಕೃತ್ರಿಮ ಬುದ್ಧಿಮತ್ತೆಯಿಂದ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆ) ಸುಲಭ ಸಾಧ್ಯ ಎಂಬುದು ಅವರ ಅಭಿಪ್ರಾಯ.
ವಿಶೇಷವೆಂದರೆ ನ್ಯಾಯಾಂಗದ ಜೊತೆ ಇತ್ತೀಚಿನ ದಿನಗಳಲ್ಲಿ ಸಂಘರ್ಷಕ್ಕೆ ಇಳಿದಿರುವ ಕೇಂದ್ರ ಸರ್ಕಾರದ ನಡೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಇದನ್ನು ಸ್ವಾಗತಿಸಿದ್ದು, ಅಲ್ಲದೇ ತ್ವರಿತಗತಿಯಲ್ಲಿ ಆದ್ಯತೆಯ ಮೇರೆಗೆ ಈ ಕ್ರಮಕ್ಕೆ ಸಹಕಾರ ನೀಡುವುದಾಗಿ ಘೋಷಿಸಿದ್ದು.
ನ್ಯಾಯವಾದಿಗಳ ವಾದ, ಅವರು ಮಂಡಿಸುವ ದಾಖಲೆಗಳು, ನ್ಯಾಯಾಧೀಶರ ತೀರ್ಪು ಎಲ್ಲವೂ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾದರೆ ಅಕ್ಷರಸ್ಥ ಅದನ್ನು ಗ್ರಹಿಸಬಲ್ಲ. ಇದರಿಂದ ತಮ್ಮ ನ್ಯಾಯವಾದಿ ಎಲ್ಲಿ ದೋಷ, ದ್ರೋಹ ಬಗೆದಿದ್ದಾನೆ; ಯಾವ ವಿಷಯವನ್ನು ಅಲ್ಲಿ ಪ್ರಸ್ತಾಪಿಸಲೇ ಇಲ್ಲ; ಅಥವಾ ಯಾವುದಕ್ಕೆ ಮಹತ್ವ ಕೊಟ್ಟಿದ್ದಾನೆ; ಕಾನೂನು ಕಟ್ಟಲೆಗಳ ಒಳಹರಿವುಗಳೇನು; ಈ ನ್ಯಾಯವಾದಿಯ ಕ್ರಮ, ವಾದ ತನಗೆ ಸೂಕ್ತವೆನಿಸಿದೆಯೋ ಅಥವಾ ಅಸಮಂಜಸವಾಗಿದೆಯೋ ಎನ್ನುವ ಅಭಿಪ್ರಾಯಕ್ಕೂ ಕಕ್ಷಿದಾರ ಬರಬಹುದು.
ಹಾಗೇ ನ್ಯಾಯಾಧೀಶ ನೀಡುವ ತೀರ್ಮಾನ ಕೂಡ ಯಾವ ದಾಖಲೆ, ವಾದದ ಹಿನ್ನೆಲೆಯಲ್ಲಿ ಹೊರಬಂದಿದೆ ಎಂಬ ಅಂಶ ಕೂಡ ಕಕ್ಷಿದಾರನಿಗೆ ಗೊತ್ತಾಗುತ್ತದೆ. ಹಾಗಂತ ಈ ಸಲಹೆ ಮತ್ತು ಆಗ್ರಹ ಇಂದು ನೆನ್ನೆಯದಲ್ಲ. ಇದಕ್ಕೆ ಶಾಸನಬದ್ಧ ಸಮ್ಮತಿಯೂ ದೊರೆತಿದೆ.
೧೯೭೪ರಲ್ಲಿ ಜ್ಯುಡಿಶಿಯಲ್ ಮ್ಯಾಜಿಸ್ಟೇಟ್ ನ್ಯಾಯಾಲಯದ ವಾದ ಮತ್ತು ತೀರ್ಪು ಕನ್ನಡದ್ದಲಿಯೇ ನಡೆಯಬೇಕು ಎಂದು ತೀರ್ಮಾನಿಸಿತ್ತು. ೧೯೮೦ರಲ್ಲಿ ಸಾರ್ವತ್ರಿಕವಾಗಿ ನ್ಯಾಯಾಲಯದ ತೀರ್ಪಿನ ಭಾಷೆ ಕನ್ನಡ ಆಗಿರಬೇಕೆಂಬ ಅಂತಿಮ ಆಜ್ಞೆ ನೀಡಲಾಗಿತ್ತು. ಗೋಕಾಕ ವರದಿ ಅನುಷ್ಟಾನದ ವೇಳೆಯೂ ಇದನ್ನೇ ಆಗ್ರಹಿಸಲಾಗಿತ್ತು. ಆ ನಂತರ ನಡೆದ ಭಾಷಾ ಮತ್ತು ಮಾಧ್ಯಮ ವಿವಾದ ಹಾಗೂ ಬೆಳವಣಿಗೆಯಲ್ಲಿ ಸ್ಥಳೀಯ ನ್ಯಾಯಾಲಯಗಳು ಕನ್ನಡದಲ್ಲಿಯೇ ವ್ಯವಹರಿಸಬೇಕು ಎನ್ನುವ ಸೂಚನೆ ನೀಡಲಾಗಿತ್ತು.
ಆದಾಗ್ಯೂ ಅಲ್ಲಲ್ಲಿ ಕೆಲವು ಮುನ್ಸೀಫ್, ಕೆಲವು ಜ್ಯೂಡಿಷಿಯಲ್ ಮ್ಯಾಜಿಸ್ಟೇಟರು (ಜಿಲ್ಲಾ ನ್ಯಾಯಾಧೀಶರು) ಕನ್ನಡದಲ್ಲಿಯೇ ತೀರ್ಪುಗಳನ್ನು ನೀಡಿದ್ದರು. ರಾಜ್ಯ ಹೈಕೋರ್ಟ್‌ನಲ್ಲಿಯೂ ಕೂಡ ಈ ಹಿಂದೆ ಇಂಗ್ಲಿಷ್‌ನಲ್ಲಿ ತೀರ್ಪಿತ್ತರೂ, ಕನ್ನಡದಲ್ಲಿಯೂ ಅನುವಾದಿಸಿ ನೀಡಿದ ಉದಾಹರಣೆಗಳಿವೆ. ೨೦೧೯-೨೦ ಮತ್ತು ೨೦೨೦-೨೧ರ ಸಾಲಿನಲ್ಲಿ ಕನ್ನಡದಲ್ಲಿ ವಾದ ಮಾಡಿದ ಹಾಗೂ ತೀರ್ಪು ನೀಡಿದವರು ೧೨೦ ಮಂದಿ ಮಾತ್ರ!
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ನೀಡಿರುವ ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ದೊರೆಯಬೇಕೆಂಬ ಸಲಹೆ ಬಹುಶಃ ಲಕ್ಷಾಂತರ ಕಕ್ಷಿದಾರರ ಕಣ್ಣಲ್ಲಿ ಹೊಸ ಬೆಳಕು ನೀಡಲು ಸಾಧ್ಯವಿದೆ. ಆದರೆ ಇದನ್ನು ನಿಯಂತ್ರಿಸುವ, ತಡೆಗಟ್ಟುವ ಸಾಧ್ಯತೆಯೂ ಇದೆ. ಇದಕ್ಕಾಗಿ ಪ್ರಬಲ ಲಾಬಿಯೂ ಕೆಲಸ ಮಾಡೀತು.
ಗೊತ್ತಿಲ್ಲದ ಭಾಷೆಯಲ್ಲಿ ವಾದ- ವ್ಯವಹಾರ- ತೀರ್ಮಾನಗಳು ನಡೆದರೆ ಅಮಾಯಕರನ್ನು ಮೋಸಗೊಳಿಸುವುದು ಅಲ್ಲದೇ ಇನ್ನಷ್ಟು ಅಜ್ಞಾನಿಗಳನ್ನಾಗಿಸುವುದು ಸಾಧ್ಯ. ಇದೇ ನೀತಿ ಸಿದ್ಧಾಂತದ ಮೇಲೆಯೇ ದಂಧೆ ನಡೆಸುತ್ತಿರುವವರಿಗೆ ಮತ್ತು ಕಕ್ಷಿದಾರನಿಗೆ ವಂಚಿಸುತ್ತಿರುವವರಿಗೆ ಅಷ್ಟರ ಮಟ್ಟಿಗೆ ಸಮಸ್ಯೆಯಾಗಲಿದೆ.
ಮುನ್ಸೀಫ್, ಜಿಲ್ಲಾ ನ್ಯಾಯಾಲಗಳಲ್ಲಿ ಅಷ್ಟೇ ಏಕೆ, ಹೈಕೋರ್ಟ್‌ಗಳಲ್ಲಿ ನಡೆಯುತ್ತಿರುವ ಕೆಲವು ಪ್ರಕರಣಗಳಲ್ಲಿ ನ್ಯಾಯವಾದಿಗಳ ಕಳಪೆ ಪ್ರದರ್ಶನ, ಗೈರು ಹಾಜರಿ ಹಾಗೂ ಹಲವೆಡೆ ಮಿಲಾಪಿ ಕುಸ್ತಿಗಳಿಂದ ವಂಚನೆಗೆ ಒಳಗಾದವರೂ ಇದ್ದಾರೆ. .
ನ್ಯಾಯವಾದಿಗಳ ಕಾರ್ಯವೈಖರಿ ಕಕ್ಷಿದಾರ ನೀಡುವ ಹಣ ಮತ್ತು ಅವನ ಅಂತಸ್ತಿಗೆ ಅನುಗುಣವಾಗಿ ಇರುವುದೇ ಹೆಚ್ಚು. ಈ ನಡುವೆ ನಿರ್ಲಕ್ಷ್ಯ. ವಕೀಲರು ತಪ್ಪು ವಾದಿಸಿದ್ದಾರೆ, ಮಿಲಾಪಿಯಾಗಿದ್ದಾರೆ; ನ್ಯಾಯಾಲಯದಲ್ಲಿ ಸಮರ್ಥವಾಗಿ ವ್ಯವಹಿಸಿಲ್ಲ ಎನ್ನುವ ಸಾಕಷ್ಟು ದೂರುಗಳು ವಕೀಲರ ಪರಿಷತ್ತು, ನ್ಯಾಯಾಲಯಗಳಲ್ಲಿ ಇವೆ. ಹಲವೆಡೆ ವಕೀಲರ ಸನ್ನದು ವಜಾ ಮಾಡಿರುವ ಅಥವಾ ದಂಡ ವಿಧಿಸಿರುವ ಸಾವಿರಾರು ಪ್ರಕರಣಗಳಿವೆ. ಆದರೆ ಅಮಾಯಕರ ಗೋಳು ಹಾಗೂ ಅನುಭವಿಸಿದ ಹಾನಿ ಮಾತ್ರ ಅಪಾರ.
ನ್ಯಾಯವಾದಿಗಳಿಂದಾದ ಗೋಳು ಕೇಳಬೇಕಿದ್ದರೆ ವಿವಿಧ ರಾಷ್ಟ್ರೀಯ, ರಾಜ್ಯ ಯೋಜನೆಗಳಿಂದ ಭೂಸ್ವಾಧೀನಕ್ಕೆ ಒಳಗಾದ ಪ್ರಕರಣಗಳನ್ನು ನೋಡಬೇಕು. ಬಾಗಲಕೋಟೆ, ಕಾರವಾರ, ಧಾರವಾಡ, ಮಂಗಳೂರು, ಇಷ್ಟೇ ಅಲ್ಲ ಎಲ್ಲ ಬಹುತೇಕ ನ್ಯಾಯಾಲಯಗಳಲ್ಲಿ ಭೂ ಪರಿಹಾರ, ಎಂವಿಸಿ ಕೇಸುಗಳು, ಅದಕ್ಕೆ ದೊರೆಯುವ ಪರಿಹಾರ, ಪ್ರಕರಣಗಳ ಮಿಲಾಪಿ ಅಥವಾ ನಿರ್ಲಕ್ಷ್ಯದಿಂದ ಲಕ್ಷಾಂತರ ಅಮಾಯಕರು ಕಣ್ಣೀರಿಡುತ್ತಿದ್ದಾರೆ.
ಶರಾವತಿ ಯೋಜನೆ ಅನುಷ್ಠಾನಗೊಂಡಿದ್ದು ೧೯೫೫ರಿಂದ ೫೯ರವರೆಗೆ. ಅಲ್ಲಿಯ ಜನ ಇನ್ನೂ ಪರಿಹಾರಕ್ಕಾಗಿ ಕೋರ್ಟಿಗೆ ಅಲೆದಾಡುತ್ತಿದ್ದಾರೆ. ಮಂಗಳೂರಿನ ಎಂಆರ್‌ಪಿಎಲ್, ಬೆಂಗಳೂರಿನ ಜಕ್ಕೂರು, ದೇವನಹಳ್ಳಿ ವಿಮಾನ ನಿಲ್ದಾಣಗಳ ವಿಷಯದಲ್ಲೂ ಇದೇ ಕಥೆ.
ಆರೇಳು ದಶಕಗಳಾದರೂ ಶರಾವತಿ, ತುಂಗಭದ್ರಾ, ಕೆ.ಆರ್.ಸಾಗರ ಅಲ್ಲೆಲ್ಲ ಭೂಸ್ವಾಧೀನಗೊಂಡ, ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸೂಕ್ತವಾದಂತಹ ಪರಿಹಾರ ದೊರೆಯಲಿಲ್ಲ. ಭೂಸ್ವಾಧೀನ ಪ್ರಕ್ರಿಯೆಯ ದೋಷವೂ ಇರಬಹುದು. ಆದರೆ ನ್ಯಾಯಾಲಯಗಳ ತೀರ್ಪು ತೀರ್ಮಾನಗಳ ವಿಳಂಬ, ಹಾಗೆಯೇ ನ್ಯಾಯವಾದಿಗಳ ನಿರ್ಲಕ್ಷ್ಯಗಳು ಬಹುತೇಕ ಕಾರಣ.
ಇತ್ತೀಚೆಗೆ ಸೀಬರ್ಡ್ ಸಂತ್ರಸ್ಥರು ಜಿಲ್ಲಾಧಿಕಾರಿಗಳಿಗೊಂದು ಮನವಿ ಸಲ್ಲಿಸಿದರು. ೮೫ರಿಂದ ೮೮ರವರೆಗೆ ನಡೆದ ಸೀಬರ್ಡ್ ಭೂಸ್ವಾಧೀನ, ಆ ನಂತರ ಅವರನ್ನು ಒಕ್ಕಲೆಬ್ಬಿಸಿ ಪರಿಹಾರದ ಐತೀರ್ಪಿನ ಘೋಷಣೆಯ ನಂತರ ಬಹುತೇಕ ಸಂತ್ರಸ್ಥರು ಹೆಚ್ಚಿನ ಪರಿಹಾರ, ಪುನರ್ವಸತಿಗಾಗಿ ವಕೀಲರಲ್ಲಿ ಮೊರೆ ಹೋಗಿದ್ದರು. ಈಗ ನ್ಯಾಯಾಲಯಗಳಿಂದ ಸಂತ್ರಸ್ಥರಿಗೆ ಹೆಚ್ಚಿನ ಪರಿಹಾರವಿಲ್ಲದೇ ಅವರು ಸಲ್ಲಿಸಲ್ಪಟ್ಟ ಅರ್ಜಿ ತಿರಸ್ಕೃತವಾಗಿದೆ.
ಜನಕ್ಕೆ ಆಗ ತಿಳಿದದ್ದು, ನ್ಯಾಯವಾದಿಗಳು ತಮ್ಮಿಂದ ಶುಲ್ಕ ಪಡೆದರೂ ನ್ಯಾಯಾಲಯಕ್ಕೆ ಹಾಜರಾಗದೇ ಅಥವಾ ಸೂಕ್ತ ದಾಖಲೆ ಒದಗಿಸುವ ಪ್ರಕ್ರಿಯೆಗಳಲ್ಲಿ ನಿರ್ಲಕ್ಷ್ಯ ತೋರಿ ಅವು ತಿರಸ್ಕೃತಗೊಂಡವು ಎಂಬುದು. ಹಾಗೆಯೇ ಕೆಲವು ನ್ಯಾಯವಾದಿಗಳು ಕಕ್ಷಿದಾರನ ವಕಾಲತ್ತಿಗೆ ಸಹಿ ಪಡೆದು, ನ್ಯಾಯಾಲಯಕ್ಕೇ ಸಲ್ಲಿಸದೇ ಅಥವಾ ಜಿಲ್ಲಾ ದಂಡಾಧಿಕಾರಿಗಳ ಒಪ್ಪಿಗೆ ಪಡೆಯದೇ ಅವಧಿ ವ್ಯರ್ಥ ಮಾಡಿದ್ದು. ಇನ್ನೂ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದಾಗಿ ನಂಬಿಸಿಬಿಟ್ಟಿದ್ದು ಸಂತ್ರಸ್ಥರ ಗೋಳು ಮುಗಿಲು ಮುಟ್ಟುವಂತೆ ಮಾಡಿತು. ಸುಮಾರು ೮೦೦ ಪ್ರಕರಣ ಈ ರೀತಿ ತಿರಸ್ಕೃತಗೊಂಡರೆ, ಈಗ ಸಂತ್ರಸ್ಥರ ಕಣ್ಣೀರು ಕಪಾಲಕ್ಕೆ ಇಳಿಯುತ್ತಿದೆ.
ಈ ನಷ್ಟಕ್ಕೆ ಯಾವ ನ್ಯಾಯವಾದಿಯ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಕ್ಷಿದಾರ ಕೇಳಿದರೆ, ನೀವು ಫಾಲೋ ಮಾಡಬೇಕಿತ್ತು; ಪ್ರಕ್ರಿಯೆಯನ್ನು ಅರಿತುಕೊಳ್ಳಬೇಕಿತ್ತು; ವಕೀಲರಿಗೆ ಗಂಟುಬಿದ್ದು ಕೆಲಸ ಮಾಡಿಕೊಳ್ಳಬೇಕಿತ್ತು ಎನ್ನುವ ಮಾತು. ಮೋಟಾರು ಅಪಘಾತಗಳದ್ದೂ ಇದೇ ಸ್ಥಿತಿ. ವಕೀಲರ ದಂಡೇ ಗಾಯಾಳುಗಳ ಅಥವಾ ಸತ್ತವರ ಕುಟುಂಬದ ಬಳಿ ಪೈಪೋಟಿಗಿಳಿಯುತ್ತಿದೆ. ಈ ದೊಡ್ಡ ಎಂವಿಸಿ ರ‍್ಯಾಕೆಟ್ ಇಂದೂ ಕೂಡ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿಯೇ ಏಜೆಂಟರೂ ಹುಟ್ಟಿಕೊಂಡಿದ್ದಾರೆ.
ಲೋಕ ಅದಾಲತ್ ಈ ಸಂಬಂಧ ವಿಶೇಷ ಕಾಳಜಿ ವಹಿಸಿದ್ದರ ಪ್ರಮಾಣ ಈಗ ಇದು ಅಲ್ಪ ಪ್ರಮಾಣಕ್ಕೆ ಇಳಿದಿದ್ದರೂ ಕೂಡ ವಿಮಾ ಕಂಪನಿಗಳ ಲಾಬಿ ಮೇಲುಗೈ ಸಾಧಿಸುತ್ತಿರುವ ಟೀಕೆಯೂ ಕೂಡ ಕೇಳಿ ಬರುತ್ತಿದೆ.
ಏನೇ ಇರಲಿ. ಅರಿಯದ ಭಾಷೆಯ ವ್ಯವಹಾರ, ಬಹುಶಃ ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪನಂಬಿಕೆ ಮೂಡಿಸಲು ಕಾರಣವಾಗುತ್ತದೆ. ಮೊದಲು ಅಕ್ಷರಸ್ಥರ ಸಂಖ್ಯೆ ಕಡಿಮೆ ಇತ್ತು. ಈಗ ಹಾಗಿಲ್ಲ. ಕೂಲಿಕಾರನ ಮಗ ಕೂಡ ಕನಿಷ್ಠ ಎಸ್ಸೆಸ್ಸೆಲ್ಸಿಯವರೆಗೆ ಓದಿದವ, ಸಾಮಾನ್ಯ ಜ್ಞಾನ ಅರಿತವ, ಪ್ರಾದೇಶಿಕ ಭಾಷೆಯನ್ನು ಓದುವವ ಹಾಗೂ ಅರ್ಥೈಸುವ, ಬಲ್ಲವರಿಂದ ಕೇಳಿ ತಿಳಿಯುವಷ್ಟು ಜಾಣ್ಮೆ ಉಳ್ಳವ.
ಇದಕ್ಕಾಗಿಯೇ ಪ್ರಾದೇಶಿಕ ಭಾಷೆಯಲ್ಲಿ ತೀರ್ಪು- ವಾದ ಲಭ್ಯವಾದರೆ ಅರ್ಧ ಗೆಲುವು ಕಕ್ಷಿದಾರನದ್ದೇ. ಕೊರೊನಾಕ್ಕಿಂತ ಮೊದಲು ೪೬೯ ಕೃತ್ರಿಮ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ) ಮೂಲಕವೇ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ತರ್ಜುಮೆ ಮಾಡಿಸಿದ್ದರು. ಕನ್ನಡಕ್ಕೆ ಸುಪ್ರೀಂ ಕೋರ್ಟಿನ ೨೩ ತೀರ್ಪುಗಳು ತರ್ಜುಮೆಯಾಗಿದ್ದವು. ತಮಿಳಿನಲ್ಲಿ ೭೦, ಹಿಂದಿಗೆ ೨೪೩ ತೀರ್ಪುಗಳು ಅಥವಾ ವಾದಗಳು ತರ್ಜುಮೆಗೊಂಡವು.
ರೈಲ್ವೆ, ಬ್ಯಾಂಕಿಂಗ್, ಪ್ರಾದೇಶಿಕ ಬ್ಯಾಂಕ್, ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಿಬ್ಬಂದಿ ನೇಮಕಾತಿ, ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷಿಕರಿಗೆ ಮಾನ್ಯತೆ ನೀಡದೆ ಆಕ್ರೋಷಕ್ಕೆ ಗುರಿಯಾಗಿದ್ದ ಕೇಂದ್ರ ಸರ್ಕಾರ, ನ್ಯಾಯಾಲಯದ ತೀರ್ಪಿನ ಭಾಷಾಂತರಕ್ಕೆ ಉತ್ಸಾಹ ತೋರುತ್ತಿರುವ ಹಿನ್ನೆಲೆ ಏನೇ ಇರಲಿ, ಬಡ ಕಕ್ಷಿಗಾರನ ಹಿತವಂತೂ ಅಡಗಿದೆ. ಹಾಗೇ, ಇದೇ ಆದ್ಯತೆ ಎಲ್ಲ ತಳಹಂತದ ನ್ಯಾಯದಾನ ಪ್ರಾದೇಶಿಕ ಭಾಷೆಯಲ್ಲಿಯೇ ಕಡ್ಡಾಯವಾಗಿ ಜರುಗುವಂತೆ ನೋಡಿಕೊಂಡರೆ ಅದು ನ್ಯಾಯ ಅಪೇಕ್ಷಿಸುವ ಜನಸಾಮಾನ್ಯರಿಗೆ ಮಾಡುವ ಮಹದುಪಕಾರ..
ಸರ್ಕಾರ ಕಲ್ಯಾಣ ಯೋಜನೆ, ವೋಟ್ ತಂತ್ರ ರಾಜಕಾರಣದ ಮೊದಲು ಇಂತಹ ಯೋಜನೆಗಳಿಗೆ ಹೆಚ್ಚು ಮಹತ್ವ ಕೊಟ್ಟರೆ, ಭಾಷಾ ಪ್ರಾವಿಣ್ಯರು ಮತ್ತು ಭಾಷೆಗಾಗಿ ಹೋರಾಡುವವರು ಜನಸಾಮಾನ್ಯರ ಬದುಕಿನ ಈ ಕಾಳಜಿಗೆ ಸ್ಪಂದಿಸಿದರೆ ಬಹುಶಃ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಬೆಳಕು ಮೂಡೀತು. ಹಾಗೂ ನ್ಯಾಯಾಂಗದ ಬಗ್ಗೆ ಇನ್ನಷ್ಟು ನಂಬಿಕೆ ಹೆಚ್ಚೀತು.
ಇಷ್ಟಕ್ಕೂ ನ್ಯಾಯಾಂಗದ ಲಾಬಿ, ಅದೂ ತಳಮಟ್ಟದ್ದು, ಇದಕ್ಕೆ ಅಡ್ಡಿಪಡಿಸದಿರಲಿ ಎನ್ನುವುದೇ ಜನಾಶಯ.