ನ. 11ರಿಂದ ಸಾಹಿತ್ಯ ಸಮ್ಮೇಳನ ಅಸಾಧ್ಯ: ಮಹೇಶ ಜೋಶಿ

ಮಹೇಶ ಜೋಶಿ
Advertisement

ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಜ್ಞಾಸೆ ಶುರುವಾಗಿದೆ. ಅಸಹಕಾರ, ಯಾವುದೇ ಪೂರ್ವಸಿದ್ಧತೆ ನಡೆಯದಿರುವುದರಿಂದ ಹಾವೇರಿಯಲ್ಲಿ ೮೬ನೇ ಸಾಹಿತ್ಯ ಸಮ್ಮೇಳನ ನ. ೧೧ ರಿಂದ ನಡೆಸುವುದು ಸಾಧ್ಯವಿಲ್ಲ. ಈ ಬೆಳವಣಿಗೆಯಿಂದ ಮನಸ್ಸಿಗೆ ನೋವಾಗಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನವೆಂಬರ್ 11, 12 ಮತ್ತು 13ರಂದು ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಪೂರ್ವಸಿದ್ಧತೆಯಾಗಿಲ್ಲ. ಆದ್ದರಿಂದ ನಿಗದಿತ ದಿನಾಂಕದಂದು ಸಮ್ಮೇಳನ ನಡೆಸುವುದು ಅಸಾಧ್ಯ. ಜಿಲ್ಲಾ ಉಸ್ತುವಾರಿ ಸಚಿವರ ಸಿದ್ಧತೆ ಸಮಾಧಾನಕರವಾಗಿಲ್ಲ, ಅದಕ್ಕಾಗಿ ಸಿಎಂ ಜತೆ ಚರ್ಚಿಸಿ ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದ್ದರು. ಬಳಿಕ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ನವೆಂಬರ್‌ನಲ್ಲೇ ಸಮ್ಮೇಳನ ನಡೆಯಲಿದೆ ಎಂದು ಹೇಳಿದ್ದಾರೆ. ಪೂರ್ವಸಿದ್ಧತೆ, ಸಮಿತಿ ರಚನೆ ಬಗ್ಗೆ ಕರೆಯಲಾಗಿದ್ದ ಸಭೆಯನ್ನು ನಾಲ್ಕು ಸಲ ಮುಂದೂಡಲಾಗಿದೆ. ಸಮ್ಮೇಳನದ ದಿನಾಂಕ ಘೋಷಣೆ ಕಸಾಪ ಅಧ್ಯಕ್ಷರೇ ಮಾಡುತ್ತಾರೆ. ಆದರೆ, ಮುಖ್ಯಮಂತ್ರಿಗಳು ಮತ್ತು ನಾನು ಇಬ್ಬರೂ ಇದೇ ಜಿಲ್ಲೆಯವರಾಗಿರುವುದರಿಂದ ಸಮನ್ವಯತೆ, ಸರ್ಕಾರದ ಸಹಕಾರದ ದೃಷ್ಟಿಯಿಂದ ಸಿಎಂ ಅವರನ್ನು ಕೇಳಿಯೇ ದಿನಾಂಕ ನಿಗದಿ ಮಾಡುತ್ತಿದ್ದೇವೆ. ಆದರೆ, ಈ ಗೊಂದಲದಿಂದ ಸಾಕಷ್ಟು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಸಮ್ಮೇಳನಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿದ್ದ 20 ಕೋಟಿ ರೂ., ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುವಂತೆ ಕೋರಿದ್ದೆ. ಆದರೆ, ಇದುವರೆಗೆ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ ಎಂದರು.