ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ 13ರಂದು ಬೆಳಗಾವಿಯಲ್ಲಿ ಧರಣಿ

ಬಸವಜಯ ಮೃತ್ಯುಂಜಯ ಸ್ವಾಮೀಜಿ
Advertisement

ಧಾರವಾಡ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಡಿ. ೧೩ರಂದು ಬೆಳಗಾವಿಯ ಕಿತ್ತೂರ ಚೆನ್ಮಮ್ಮ ವೃತ್ತದಲ್ಲಿ ಸಮಾಜ ಬಾಂಧವರ ಧರಣಿ ನಡೆಸಿ ಸುವರ್ಣಸೌಧದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕೂಡಲಸಂಗಮದ ಶ್ರೀ ಜಯ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-೨ ಮತ್ತು ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆ ಬೇಡಿಕೆಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತ ಬಂದಿದೆ. ಹಿಂದಿನ ಬಿಜೆಪಿ ಸರಕಾರ ಬೇಡಿಕೆ ಈಡೇರಿಸುವಲ್ಲಿ ವಿಫಲಗೊಂಡಿತು. ಆದರೆ ಈಗ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಪಂಚಮಸಾಲಿ ಸಮಾಜದ ಶಾಸಕರೊಂದಿಗೆ ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ. ಸರಕಾರದ ನಿರ್ಲಕ್ಷ್ಯಧೋರಣೆ ಖಂಡಿಸಿ ಮತ್ತೆ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಪಾದಯಾತ್ರೆ ಮೂಲಕ ಸುವರ್ಣಸೌಧಕ್ಕೆ ತೆರಳಿ ಸರಕಾರದ ಮೇಲೆ ಒತ್ತಡ ತರಲು ನಿರ್ಧರಿಸಲಾಗಿದೆ. ಸದ್ಯ ಆಡಳಿತಾರೂಢ ಪಕ್ಷದಲ್ಲಿನ ಪಂಚಮಸಾಲಿ ಸಚಿವರು ಹಾಗೂ ಶಾಸಕರು ತಮ್ಮ ಇತಿಮಿತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.