ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನಿಶ್ಚಿತ – ಸಚಿವ ಮುರುಗೇಶ ನಿರಾಣಿ

Advertisement

ಲಕ್ಷ್ಮೇಶ್ವರ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕೆನ್ನುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪ್ರಬಲ ಇಚ್ಛೆಯಾಗಿತ್ತು. ಆದರೆ ಕಾರಣಾಂತರಗಳಿಂದ ಕೈಗೂಡಿರಲಿಲ್ಲ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ೨ಎ ಮೀಸಲಾತಿ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ೨೦೧೦ ರಲ್ಲಿಯೇ ಮೀಸಲಾತಿ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿದ್ದು, ಸಮಾಜ ಈ ನಿಟ್ಟಿನಲ್ಲಿ ಕಳೆದ ೨-೩ ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದೆ.
ಪಂಚಮಸಾಲಿ ಸಮಾಜದವರು ಸಹ ಉದ್ಯೋಗ ಸೃಷ್ಟಿ ಮಾಡುವುದರಲ್ಲಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆದು ಬರಬೇಕಾಗಿದೆ ಎಂದರು.
ಬೇರೆ ಬೇರೆ ಸಮಾಜಗಳು ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಹ ಅನೇಕ ಉನ್ನತ ಹುದ್ದೆಗಳಲ್ಲಿದ್ದಾರೆ. ಇದು ಅವರ ಸಮಾಜಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಮತ್ತೊಂದು ಸಮಾಜವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕೆ ಹೊರತು ಬೇರೊಂದು ಸಮಾಜವನ್ನು ಟೀಕಿಸುವ ಕಾರ್ಯವನ್ನು ಯಾರು ಮಾಡಬಾರದು. ಅಂತಹವರಿಗೆ ಬುದ್ದಿ ಹೇಳುವ ಕಾರ್ಯವನ್ನು ಮಾಡಬೇಕೆಂದ ಅವರು, ಸೂರ್ಯ, ಚಂದ್ರರು ಹುಟ್ಟುವುದು ಎಷ್ಟು ಸತ್ಯವೋ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ದೊರೆಯುವದು ಅಷ್ಟೇ ಸತ್ಯ ಎಂದು ಹೇಳಿದರು.