ಪಕ್ಷಾಂತರದ ಗುಟ್ಟು ದೇವರ ಸಿಟ್ಟು

Advertisement

ಮೊದಲಿನಿಂದಲೂ ಪಕ್ಕಾ ಹನುಮಪ್ಪನ ಪರಮ ಭಕ್ತನಾಗಿದ್ದ ತಿಗಡೇಸಿ ಏನೇ ಕೆಲಸವಾಗಬೇಕಿದ್ದರೂ ಆತನ ಪಾದಕ್ಕೆರಗಿಯೇ ಮುಂದಿನ ಕೆಲಸ ಮಾಡುತ್ತಿದ್ದ. ಕಳೆದ ಬಾರಿ ಗ್ರಾಮ ಪಂಚಾಯ್ತಿಗೆ ನಿಲ್ಲುವ ಹಾಗೆ ಮಾಡು ಅಂತ ಬೇಡಿಕೊಂಡಿದ್ದ. ಹನುಮಪ್ಪ ಅದಕ್ಕೆ ಹೂಂ ಅಂದನೋ ಏನೋ ಪಂಚಾಯ್ತಿ ಎಲೆಕ್ಷನ್ನಿಗೆ ನಿಂತ ಆದರೆ ಗೆಲ್ಲಲಿಲ್ಲ. ಓಹೋ ನಾನು ಬರೀ ನಿಲ್ಲುವ ಹಾಗೆ ಮಾಡು ಅಂದಿದ್ದೆ. ಅಷ್ಟೇ ಮಾಡಿದ. ನಾನು ಗೆಲ್ಲಿಸು ಎಂದು ಕೇಳಿರಲಿಲ್ಲ.. ಅದಕ್ಕೆ ಗೆದ್ದಿಲ್ಲ. ಇದರಲ್ಲಿ ಆತನ ತಪ್ಪು ಇಲ್ಲ ಎಂದು ಕಂಟ್ರಂಗಮ್ಮತ್ತಿಯ ಮುಂದೆ ಹೇಳಿ ತನ್ನ ದೇವರನ್ನು ಸಮರ್ಥಿಸಿಕೊಂಡಿದ್ದ. ಈ ಬಾರಿಯೂ ಚುನಾವಣೆಗೆ ಇಂಡಿಪೆಂಡೆಂಟ್ ಆಗಿ ನಿಲ್ಲುತ್ತೇನೆ. ನನ್ನ ದೇವರು ನನ್ನ ಕೈ ಬಿಡಲ್ಲ ಎಂದು ಕಂಟ್ರಂಗಮ್ಮತ್ತಿಯ ಮುಂದೆ ಹೇಳಿದ. ಅದಕ್ಕೆ ಆಕೆ…. ಹುಚ್ವಾ…. ನಿನಗೆ ತಲೆಗಿಲೆ ಇದೆಯಾ? ಈಗ ಕಾಲ ಬದಲಾಗಿದೆ. ನೀನು ಈ ದೇವರನ್ನು ಕೇಳಿಕೊಂಡೆ ಅಂದರೆ ಉಳಿದ ದೇವರು ನನಗೊಂದು ಮಾತೂ ಹೇಳಿಲ್ಲ ಅಂತ ಸಿಟ್ಟಿಗೆ ಬರುವುದಿಲ್ಲವೇ? ಮತ್ತೆ ಯರ‍್ಯಾರಿಗೋ ಹೇಳಿ ನಿಲ್ಲದ ಹಾಗೆ ಮಾಡಿದರೆ ಏನು ಮಾಡುತ್ತಿ? ಸ್ವಲ್ಪ ವಿಚಾರ ಮಾಡು ಅಂದಾಗ… ಅಯ್ಯೋ ಹೌದಲ್ಲವೇ? ನನಗೆ ಇದು ಹೊಳಿಯಲೇ ಇಲ್ಲ ಅಂದುಕೊಂಡ. ಮರುದಿನವೇ ಗುಟ್ಟು ಗುಟ್ಟಾಗಿ ಶಿವ.. ಪಾರ್ವತಿ… ಕರೆಪ್ಪತಾತ.. ಸಜ್ಜಿ ಹೊಲದ ದುರುಗಮ್ಮ…. ಕಂಟಿ ದುರುಗವ್ವ…. ತೊಂಡಿತೇರಪ್ಪ.. ಯಂಕಟ್ರಮಣ… ಉಡುಚಮ್ಮ… ಹೀಗೆ ನಾನಾ ದೇವರ ಗುಡಿಗಳಿಗೆ ತಿರುಗಾಡಿ.. ಜೋಡು ಗಾಯಿ ಒಡೆಸಿದ. ಅಷ್ಟರಲ್ಲಿ ಯಾರೋ ಬಂದು ಇಂಥ ದೇವರನ್ನು ಬಿಟ್ಟಿದಿಯ ನೋಡು ಅಂದ ಕೂಡಲೇ ಆ ದೇವಸ್ಥಾನಕ್ಕೂ ಓಡೋಡಿ ಹೋಗಿ ಜೋಡುಗಾಯಿ ಒಡೆಸಿಕೊಂಡು ಬರುತ್ತಿದ್ದ. ಹೊಸಗುಡ್ಡದ ಗುಡ್ಡದ ಮೇಲೆ ಇರುವ ಬಸವಣ್ಣನ ಗುಡಿಗೆ ಬರಿಗಾಲಲ್ಲಿ ಹೋಗಿಬಂದ. ಇಷ್ಟು ಮಾಡುವಷ್ಟರಲ್ಲಿ ನಾಮ ಪತ್ರ ಸಲ್ಲಿಸುವ ದಿನಾಂಕ ಮುಗಿದು ಹೋಗಿತ್ತು. ಅದು ಗೊತ್ತಾದಾಗ ತಿಗಡೇಸಿ ತಲೆ ಮೇಲೆ ಕೈ ಹೊತ್ತು ಕುಳಿತ. ಕಂಟ್ರಂಗಮ್ಮತ್ತಿ ಮಾತ್ರ… ಈ ತಿಗಡೇಸಿ ಮೊದಲು ಹನುಮಪ್ಪನಿಗೆ ಮಾತ್ರ ನಿಷ್ಠೆಯಿಂದ ಇದ್ದ. ಈಗ ಎಲ್ಲ ದೇವರುಗಳಿಗೆ ಬೆಣ್ಣೆ ಹಚ್ಚುತ್ತಿದ್ದಾನೆ. ಇದೂ ಒಂಥರ ಪಕ್ಷಾಂತರವೇ ಎಂದು ಸಿಟ್ಟಿಗೆದ್ದು ಆ ಹನುಮಪ್ಪನೇ ಟಿಕೆಟ್ ತಪ್ಪುವ ಹಾಗೆ ಮಾಡಿದಾನೆ ಎಂದು ಎಲ್ಲರ ಮುಂದೆ ಹೇಳತೊಡಗಿದ್ದಾಳೆ.