ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಬೃಜೇಶ್ ಗೆಲುವಿಗಾಗಿ ದುಡಿಯುತ್ತೇವೆ

Advertisement

ಪಕ್ಷವನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ನಾನು ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದವ. ಬೂತು ಮಟ್ಟದಿಂದ ಬಂದವ. ಪಕ್ಷ ಹೇಳಿದ ಕೆಲಸವನ್ನು ಜವಾಬ್ದಾರಿಯಾಗಿ ನಿರ್ವಹಿಸಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬೃಜೇಶ್ ಚೌಟಾ ಆಯ್ಕೆಯಾದ ಬೆನ್ನಲ್ಲೆ ಮಾಧ್ಯಮ ಮಿತ್ರರನ್ನು ಕರೆಸಿ ದ.ಕ. ಲೋಕಸಭಾ ಅಭ್ಯರ್ಥಿ ಬೃಜೇಶ್ ಚೌಟ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಬೃಜೇಶ್ ಚೌಟ ಸೇನೆಯಲ್ಲಿ ಕೆಲಸ ಮಾಡಿದವರು. ಯುವಕರಿಗೆ ಅವಕಾಶ ನೀಡ ಬೇಕು ಎಂಬ ಹಿನ್ನಲೆಯಲ್ಲಿ ಬೃಜೇಶರಿಗೆ ಅವಕಾಶ ದೊರೆತಿದೆ. ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯ ಇದೆ. ಬೃಜೇಶ ಅವರ ಗೆಲುವಿಗಾಗಿ ಎಲ್ಲರೂ ದುಡಿಯ ಬೇಕು. ಆ ಮೂಲಕ ಪಕ್ಷವನ್ನು ಗೆಲ್ಲಿಸಿ ರಾಷ್ಟ್ರದ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಅಧಿಕಾರ ಸ್ವೀಕರಿಸ ಬೇಕು ಎಂದರು.
ಭಾರತೀಯ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಅತೀಹೆಚ್ಚು ಸಮಯ ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ, ಅಧ್ಯಕ್ಷನಾಗಿ ಕೆಲಸ ಮಾಡಲು ಪಕ್ಷ ಅವಕಾಶ ನೀಡಿದೆ. ಕೇರಳದಲ್ಲಿ ನಡೆದ ಚುನಾವಣಾ ಸಂದರ್ಭದಲ್ಲಿ ಪ್ರಭಾರಿಯಾಗಿ ಜವಾಬ್ದಾರಿಯನ್ನೂ ನಿರ್ವಹಿಸಿದ್ದೆ. ಹಿರಿಯರ ಅಪೇಕ್ಷೆ, ನಂಬಿಕೆಗಳಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಮತ್ತು ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಿರಿಯ ನಾಯಕರಾದ ವೆಂಕಯ್ಯನಾಯ್ಡು, ನಿತಿನ್ ಗಡ್ಕರಿ, ಅಮಿತ್ ಷಾ, ನಡ್ಡಾ, ಸಹಕಾರ ನೀಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ತಿಳಿಸಿದರು.

ಹಿಂದುತ್ವವೇ ನನ್ನ ಬದ್ದತೆ, ಅಭಿವೃದ್ದಿಯೇ ನನ್ನ ಆದ್ಯತೆ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಅವಕಾಶ ಕೊಟ್ಟ ಭಾರತೀಯ ಜನತಾಪಕ್ಷಕ್ಕೆ ಕೃತಜ್ಞತೆ ಗಳನ್ನು ಸಲ್ಲಿಸಿದ್ದೇನೆ. ಸಂಘಪರಿವಾರದವರಿಗೆ, ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಲ್ಲಿಯ ಮಣ್ಣಿಗೆ ವಿಶೇಷ ಗುಣವಿದೆ. ಇಲ್ಲಿಯ ದೈವ ದೇವರುಗಳಿಗೆ ನಮಸ್ಕರಿಸುತ್ತಾ, ನನ್ನ ತಂದೆತಾಯಿಯವರ ಆಶೀರ್ವಾದ ಪಡೆದು ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ. ಹಿಂದುತ್ವವೇ ನನ್ನ ಬದ್ದತೆ, ಅಭಿವೃದ್ದಿಯೇ ನನ್ನ ಆದ್ಯತೆ ಎಂಬ ನಿಲುವಿನೊಂದಿಗೆ ಪಕ್ಷವನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯೊಂದಿಗೆ ಚುನಾವಣೆ ಎದುರಿಸುತ್ತೇನೆ. ಎಲ್ಲರ ಸಹಕಾರ ಬೇಕು. ಮುಖ್ಯವಾಗಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ ಎಂದು ಬ್ರಿಜೇಶ್ ಚೌಟ ತಿಳಿಸಿದರು.