ಪರಮಾತ್ಮನ ಮೂರು ಸ್ತರಗಳು

Advertisement

ಮೂರು ವಿಧದ ಅಥವಾ ಮೂರು ಹಂತದ ಭಕ್ತರಿರುತ್ತಾರೆ. ಕೆಲವರು ದೇವರನ್ನು ಮೂರ್ತಿಯಲ್ಲಿ ಕಂಡು ಅನುಭವಿಸುತ್ತಾರೆ, ಮತ್ತೆ ಕೆಲವರು ಹೃದಯದಲ್ಲಿ ಅವನನ್ನು ಕಾಣುತ್ತಾರೆ, ಇನ್ನು ಕೆಲವರು ಎಲ್ಲ ಕಡೆ ಅವನನ್ನು ಕಾಣುತ್ತಾರೆ. ಇವೆಲ್ಲಕ್ಕೂ ನಮ್ಮಲ್ಲಿ ಅವಕಾಶವಿದೆ. ಮೂರ್ತಿ ಪೂಜೆ ಮಾಡುವವರನ್ನು ದೇವರೆಲ್ಲಿದ್ದಾನೆಂದು ಕೇಳಿದರೆ ಗುಡಿಯಲ್ಲಿರುವ ಮೂರ್ತಿಗಳನ್ನು ಶ್ರದ್ಧೆಯಿಂದ ತೋರಿಸುತ್ತಾರೆ. ಅಲ್ಲಿ ಅವರು ದೇವರ ಭಕ್ತಿಯನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ದೇವರು ಅವರಿಗೆ ಮೂರ್ತಿ ರೂಪದಲ್ಲಿದ್ದು ಅನುಗ್ರಹಿಸುತ್ತಾನೆ. ಕೆಲವು ಮತಗಳು ದೇವರು ಮೇಲೆ ಆಕಾಶದಲ್ಲಿದ್ದಾನೆಂದು ಹೇಳುತ್ತಾರೆ. ಕೆಲವರು ಅಗ್ನಿಯಲ್ಲಿ ಆರಾಧಿಸುತ್ತಾರೆ. ಇವೆಲ್ಲವೂ ಸರಿಯಾಗಿದ್ದೇ ಆಗಿದೆ. ಭಗವಂತ ಇವಕ್ಕೆ ಅವಕಾಶವಿಟ್ಟಿದ್ದಾನೆ. ನಮ್ಮಲ್ಲಿಯಂತೂ ಮೂರ್ತಿಯಲ್ಲಿ ನೋಡದೆ ಜಡವಸ್ತುವಾಗಿ ನೋಡುವುದು ಅಪರಾಧ. ಪ್ರತಿಮಾಯಾಂ ಶಿಲಾಬುದ್ಧಿಂ ಕುರ್ವಾಣೋ ನರಕಂ ವ್ರಜೇತ್' ಈ ಕಟ್ಟಪ್ಪಣೆಯನ್ನು ನೋಡಿದರೆ ಈ ಮೊದಲ ಹಂತದ ಭಕ್ತಿ ಅತ್ಯಂತ ಸರಿಯಾದುದು ಎಂಬುದಾಗಿ ಅನಿಸುತ್ತದೆ. ಇವರಿಗಿಂತ ಸ್ವಲ್ಪ ಮುಂದುವರಿದ ಭಕ್ತರು ಅಂದರೆ ಭಕ್ತಿ ಸಾಧನೆಯ ಮಾರ್ಗದಲ್ಲಿ ಮುಂದುವರೆದವರು, ಹೃದಯದಲ್ಲಿ ದೇವರಿದ್ದಾನೆ ಎಂದು ಹೇಳುತ್ತಾರೆ. ಅವನು ಎಲ್ಲರಿಗೂ ಪ್ರಾಣ ಶಕ್ತಿಯನ್ನು ಕೊಡುತ್ತ ಒಳಗಿದ್ದಾನೆ. ಮೂಲಾಧಾರಾದಿ ಏಳು ಚಕ್ರಗಳಲ್ಲಿ ಬೇರೆ ಬೇರೆ ದೇವತೆಗಳ ರೂಪದಲ್ಲಿದ್ದಾನೆ. ಅದರಿಂದ ನಮ್ಮ ಶರೀರ-ಮನಸ್ಸುಗಳ ಅನೇಕ ಸೂಕ್ಷö್ಮ ಚಟುವಟಿಕೆಗಳಾಗುತ್ತವೆಯೆಂದು ಅವರು ಹೇಳುತ್ತಾರೆ. ಮೂರ್ತಿ ಪೂಜೆಯ ಭಕ್ತಿಯಲ್ಲಿ ಸಾಕಷ್ಟು ಮುಂದುವರಿದವರು ಈ ಹಂತಕ್ಕೆ ಬರುತ್ತಾರೆ. ಹೀಗೆ ಮುಂದುವರೆದವರು ಬಾಹ್ಯಮೂರ್ತಿ ಪೂಜೆಯನ್ನು ಬಿಟ್ಟು ಅಂತರಂಗದಲ್ಲಿಯೇ ಉಪಾಸನೆ ಮಾಡುವುದನ್ನು ಕಾಣುತ್ತೇವೆ. ಆದರೆ ಉಳಿದವರು ಮೂರ್ತಿಪೂಜೆ ಮಾಡುತ್ತಿದ್ದರೆ ಅದನ್ನು ಹಾರ್ದಿಕವಾಗಿ ನಿರಾಕರಿಸುವುದಿಲ್ಲ, ಬದಲಾಗಿ ಬೆಂಬಲಿಸುತ್ತಾರೆ. ಇದರಿಂದ ಇದು ಮೂರ್ತಿ ಪೂಜೆಗಿಂತ ಮುಂದುವರಿದ ಹಂತ ಎಂಬುದು ಗೊತ್ತಾಗುತ್ತದೆ.ಮುನೀನಾಂ ಹೃದಿ ದೈವತಮ್’. ಇಂತಹ ಅಂತರಂಗ ಸಾಧಕರನ್ನು ಮುನಿಗಳೆಂದು ಕರೆದು ಈ ವರ್ಗದ ಭಕ್ತಿಯನ್ನು ಪುರಸ್ಕರಿಸಿದ್ದಾರೆ. ಮತ್ತೂ ಮುಂದುವರಿದ ಭಕ್ತರು ಪರಮಾತ್ಮನು ಎಲ್ಲ ಕಡೆ ಇದ್ದಾನೆ, ಎಲ್ಲವೂ ಆಗಿದ್ದಾನೆ ಎನ್ನುತ್ತಾರೆ. ಹೀಗೆ ಅನುಭವದಿಂದ ಕಾಣುವರು ಜ್ಞಾನಿಗಳು. ಜ್ಞಾನಿಗಳು ಮತ್ತೂ ಮುಂದುವರಿದವರು ಎಂಬುದಕ್ಕೆ ಅವರು ಹಿಂದಿನ ಎರಡು ಹಂತಗಳನ್ನು ನಿರಾಕರಿಸದಿರುವುದೇ ಸಾಕ್ಷಿ. ಪ್ರಹ್ಲಾದನು ಹೀಗೆ ಇದ್ದ. `ಸರ್ವತ್ರೈವ ಮನೀಷಾಣಾಂ.
ಅಂದರೆ ಪರಮಾತ್ಮನ ಅಸ್ತಿತ್ವವೆ ವಿಚಿತ್ರವಾದುದು. ಈ ಮೂರು ಆಯಾ ಸ್ತರದಲ್ಲಿ ಸತ್ಯವೆ ಆಗಿವೆ. ಅಲ್ಲದೇ ಮೊದಲನೇ ಹಂತಕ್ಕೆ ಹೋಗದೆ ಎರಡನೆ ಹಂತಕ್ಕೆ ಹೋಗಲಿಕ್ಕಾಗುವುದಿಲ್ಲ, ಎರಡನೇ ಹಂತಕ್ಕೆ ಹೋಗದೇ ಮೂರನೇ ಹಂತಕ್ಕೆ ಹೋಗಲಿಕ್ಕಾಗುವುದಿಲ್ಲ. ಆದ್ದರಿಂದ ಮೊದಲು ಮೂರ್ತಿಪೂಜೆ. ಗುಡಿಯಲ್ಲಿ ಪೂಜೆ ಮಾಡಲು ಸಾಧ್ಯವಾಗದಿದ್ದರೆ ಸುಂದರವಾದ ಫೋಟೊ ಇದ್ದರೆ ಸಾಕಾಗುತ್ತದೆ.