ಎಲ್ಲ ಪ್ರಕಾರದ ಉಪಾಸನೆಗಳು ಮತ್ತು ಕರ್ಮಗಳು ಒಂದೇ ದೇವರಿಗೆ ತಲುಪುತ್ತವೆ ಎಂಬುದು ವೈದಿಕ ಧರ್ಮದ ಉದಾತ್ತ ಸಂದೇಶಗಳಲ್ಲೊಂದು. ಹಾಗಾದರೆ ಇಷ್ಟೆಲ್ಲ ದೇವತೆಗಳ ಪೂಜಾ ಪದ್ಧತಿಯನ್ನು ನಮ್ಮಲ್ಲಿ ಏಕೆ ಬಳಸಿದ್ದಾರೆ? ಒಂದೇ ದೇವರ ಉಪಾಸನೆಯನ್ನೇ ಎಲ್ಲರಿಗೂ ಹೇಳಬಹುದಿತ್ತಲ್ಲ? ಒಬ್ಬೊಬ್ಬರು ತನ್ನಿಷ್ಟದಂತೆ ಒಂದೊಂದು ದೇವತೆಯನ್ನು ಉಪಾಸನೆ ಮಾಡುವುದಷ್ಟೇ ಅಲ್ಲ, ಕೆಲವರು ಒಬ್ಬರೇ ಅನೇಕ ದೇವತೆಗಳನ್ನು ಪೂಜಿಸುವವರೂ ಇದ್ದಾರೆ.
ಈ ಅನೇಕ ದೇವತೋಪಾಸನೆ ಏಕೆ? ಇಂತಹ ಪ್ರಶ್ನೆಗಳು ಅನೇಕರಲ್ಲಿ ಉದ್ಭವಿಸುತ್ತವೆ. ದೇವತೆಗಳು ಅನೇಕವೂ ಹೌದು, ಏಕವೂ ಹೌದು. ಒಂದು ಹಂತದಲ್ಲಿ ಏಕ, ಇನ್ನೊಂದು ಹಂತದಲ್ಲಿ ಅನೇಕ. ಪರಮಾತ್ಮನು ಮೂಲತಃ ಒಬ್ಬನೇ ಆಗಿದ್ದರೂ, ಜಗತ್ತಿನ ಪ್ರಕ್ರಿಯೆಯನ್ನು ನಡೆಸಿಕೊಂಡು ಹೋಗಲು ಆತ ಅನೇಕನೂ ಆಗುತ್ತಾನೆ. ಜಗತ್ತು ಅಸ್ತಿತ್ವದಲ್ಲಿ ಇದೆ ಎಂದಾದ ಮೇಲೆ ಅನೇಕ ದೇವತೆಗಳೂ ಕೂಡ ಇರಲೇಬೇಕಾಗುತ್ತದೆ.
ಪೃಥ್ವಿಯಲ್ಲಿ ಬೇರೆ ದೇವತೆ, ವಾಯುವಿನಲ್ಲಿ ಬೇರೆ ದೇವತೆ, ಸೂರ್ಯನಲ್ಲಿ ಬೇರೆ ದೇವತೆ, ಹೀಗೆ ಜಗತ್ತೆಲ್ಲ (ನೋಡುವ ದೃಷ್ಟಿ ಇದ್ದರೆ) ದೇವತಾಮಯವೇ ಆಗಿದೆ. ನಮ್ಮ ಶರೀರದಲ್ಲಿಯೂ ಒಂದೊಂದು ಇಂದ್ರಿಯಗಳಿಗೆ ಒಂದೊಂದು ದೇವತೆಗಳ ಹಿನ್ನೆಲೆ ಇರುತ್ತದೆ. ಜಗತ್ತೆಲ್ಲವೂ ಮೂಲ ಕಾರಣನಾದ ಪರಮಾತ್ಮನಲ್ಲಿ ಲಯಗೊಂಡಾಗ ಈ ಅನೇಕ ದೇವತೆಗಳೂ ಕೂಡ ಪರಮಾತ್ಮನಲ್ಲಿಯೇ ಐಕ್ಯಗೊಳ್ಳುತ್ತವೆ. ಹಾಗೆಯೇ ಜೀವಿಯು ಮರಣ ಹೊಂದಿದಾಗ ಅವನ ಇಂದ್ರಿಯಗಳಿಗೆ ಹಿನ್ನೆಲೆಯಾಗಿ ನಿಂತಿರುವ ದೇವತೆಗಳು ತಮ್ಮ ಮೂಲಕ್ಕೆ ಹೋಗಿ ಸೇರಿಕೊಂಡಿರುತ್ತವೆ. ಹೀಗೆ ಮೂಲತಃ ಒಂದೇ ದೇವತೆಯಾಗಿದ್ದರೂ ದೇವತೆಗಳಲ್ಲಿ ಒಂದು ಹಂತದಲ್ಲಿ ಅನೇಕತ್ವವೂ ಇದೆ.
ಪರಮಾತ್ಮನು ಒಬ್ಬನೇ ದೇವತೆ ಎಂಬುದು ತುಂಬಾ ಎತ್ತರದ ಸ್ಥಿತಿ. ಅದನ್ನು ಪರಮಾರ್ಥ' ಎಂಬುದಾಗಿ ಕರೆಯುತ್ತಾರೆ. ದೇವತೆಗಳು ಅನೇಕ ಎಂಬುದು ಈಗ ನಾವೆಲ್ಲರೂ ಇರುವ ವ್ಯಾವಹಾರಿಕ ಸ್ಥಿತಿ. ಇದನ್ನು
ವ್ಯಾವಹಾರಿಕ ಸತ್ಯ’ ಎಂಬುದಾಗಿ ಕರೆಯುತ್ತಾರೆ. ವ್ಯವಹಾರ ಪ್ರಪಂಚದಲ್ಲಿ ನಾವಿದ್ದ ಮೇಲೆ ದ್ವೈತ ಇದ್ದೇ ಇರುತ್ತದೆ. ಅಲ್ಲದೇ ದೇವತಾ ಭೇದಗಳೂ ಇದ್ದೇ ಇರುತ್ತವೆ.
ಉತ್ತಮರಾದ ಜ್ಞಾನಿಗಳು ಪರಮಾರ್ಥಕ್ಕೆ ಏರಿರುವುದರಿಂದ, ಅವರಿಗೆ ಏಕ ದೇವತೋಪಾಸನೆ, ನಾವು ಇನ್ನೂ ವ್ಯವಹಾರದಲ್ಲೇ ಇರುವುದರಿಂದ, ಉತ್ತಮಾಧಿಕಾರಿಗಳಲ್ಲದ ನಮಗೆ ಅನೇಕ ದೇವತೋಪಾಸನೆ ಸರಿ ಹೋಗುತ್ತದೆ. ಇಲ್ಲಿ ಶಂಕರಾಚಾರ್ಯರು ಹೇಳಿದ ಮಾತು ಉಲ್ಲೇಖನೀಯ : `ಭಾವಾದ್ವೈತಂ ಸದಾ ಕುರ್ಯಾತ್ ಕ್ರಿಯಾದ್ವೈತಂ ನ ಕರ್ಹಿಚಿತ್’ ಪರಮಾರ್ಥತಃ ಪರಮಾತ್ಮನೆಂಬ ಒಂದೇ ದೇವತೆ ಇರುವುದಾಗಿ ಚಿಂತನೆ ಇರಬೇಕು. ಆದರೆ ವ್ಯಾವಹಾರಿಕ ಪ್ರಪಂಚದಲ್ಲಿ, ಕ್ರಿಯಾಕಲಾಪಗಳಲ್ಲಿ ಅದ್ವೈತವನ್ನು ತರಬಾರದು.