ಪವರ್‌ಫುಲ್ ಪಂಚಾಯತ್‌ರಾಜ್‌ಗೆ ನಾಂದಿ ಗ್ರಾಮಸಭೆ ಕಲಾಪ ನೇರಪ್ರಸಾರಕ್ಕೆ ಬುನಾದಿ

Advertisement

ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಮತ್ತು ಗುಣಾತ್ಮಕವಾಗಿ ಅಭಿವೃದ್ಧಿಪಡಿಸಲು ಪ್ರಗತಿ ಪಥ ಯೋಜನೆ ಪ್ರಕಟವಾಗಿದೆ. ಇದರಂತೆ ೧೮೯ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ೫೦ ಕಿ.ಮೀ. ಉದ್ದದ ರಸ್ತೆಗಳಂತೆ, ಒಟ್ಟಾರೆ ೯,೪೫೦ ಕಿ.ಮೀ. ಉದ್ದದ ರಸ್ತೆ ಸಂಪರ್ಕ ಜಾಲವನ್ನು ೫,೨೦೦ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದ ೩೮ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ಒಟ್ಟು ೧,೧೫೦ ಕಿ.ಮೀ. ರಸ್ತೆಗಳನ್ನು ೧,೦೦೦ ಕೋಟಿ ರೂ.ಗಳ ವೆಚ್ಚದಲ್ಲಿ ಕಾಯಕಲ್ಪ ಕಾಣಲಿವೆ.
ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಗ್ರಾಮ ಪಂಚಾಯತಿಗಳನ್ನು ಸಾಮಾಜಿಕ ಕಳಕಳಿಯುಳ್ಳ ಸ್ಪಂದನಾಶೀಲ ಹಾಗೂ ಸಮರ್ಥ ಗ್ರಾಮ ಸರ್ಕಾರಗಳನ್ನಾಗಿ ರೂಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ನರೇಗಾ ಯೋಜನೆಯಡಿ ಈ ವರ್ಷ ೧೬ ಕೋಟಿ ಮಾನವ-ದಿನಗಳನ್ನು ಸೃಜಿಸಿ, ಸುಮಾರು ೩೦ ಲಕ್ಷ ಕುಟುಂಬಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಪ್ರಮುಖವಾಗಿ ಜಲಾನಯನ ಇಲಾಖೆಯ ಒಗ್ಗೂಡಿಸುವಿಕೆಯೊಂದಿಗೆ ೫,೦೦೦ ಎಕರೆ ಸವಳು-ಜವಳು ಭೂಮಿಯನ್ನು ಸುಧಾರಿಸುವ ಮತ್ತು ಪ್ರತಿ ತಾಲ್ಲೂಕಿಗೆ ಕನಿಷ್ಠ ೨ರಂತೆ ಬೂದು ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.
ಹಿರಿಯ ಜೀವಗಳಿಗೆ ಉಪಶಮನ
೧೦೦ ಪಂಚಾಯಿತಿಗಳಲ್ಲಿ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಹಿರಿಯ ನಾಗರಿಕರ ಆರೈಕೆ ಮತ್ತು ಚಿಕಿತ್ಸೆಗೆ ಉಪಶಮನ ಕೇಂದ್ರಗಳ ಪ್ರಾರಂಭ. ಮಹಿಳೆಯರ ಆಕಾಂಕ್ಷೆ ಮತ್ತು ಆಸಕ್ತಿಗೆ ಅನುಗುಣವಾಗಿ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡಲು ಸಾವಿತ್ರಿಬಾಯಿ ಫುಲೆ ಮಹಿಳಾ ಸಬಲೀಕರಣ ಯೋಜನೆ. ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿ ತಲಾ ಒಂದು ಲಕ್ಷ ರೂ. ನೆರವಿನೊಂದಿಗೆ ಸ್ವಸಹಾಯ ಗುಂಪುಗಳ ನೆರವಿನಿಂದ ಎಣ್ಣೆ ಗಾಣ ಸ್ಥಾಪನೆ. ೫೦ ಗ್ರಾಪಂಗಳಲ್ಲಿ ಹೊಂಬೆಳಕು ಕಾರ್ಯಕ್ರಮದಡಿ ೨೫ ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ದೀಪ ಅಳವಡಿಕೆ. ೨೦೦ ಗ್ರಾಪಂನಲ್ಲಿ ಬೀದೀಪಗಳ ವ್ಯವಸ್ಥಿತ ಮೀಟರಿಂಗ್. ಪ್ರೇರಣಾ ಕಾರ್ಯಕ್ರಮದಡಿ ಸ್ವಸಹಾಯ ಗುಂಪುಗಳ ಮಹಿಳೆಯರು, ಗ್ರಾಮ ಪಂಚಾಯಿತಿಗಳ ಮಹಿಳಾ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದ ಮುಂಚೂಣಿಯ ಕಾರ್ಯಕರ್ತೆಯರಲ್ಲಿ ‘ಮುಟ್ಟಿನಕಪ್’ಬಳಕೆಯನ್ನು ಪ್ರೋತ್ಸಾಹಿಸಲಾಗುವುದು.ಇತರೆ ಮಹಿಳೆಯರು ಬಳಸಲು ಪ್ರೇರೇಪಿಸುವುದು.
೧೦೦೦ ಗ್ರಾಪಂಗಳಲ್ಲಿ ‘ನನ್ನ ಗುರುತು’
ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಮಾನ್ಯತೆಯುಳ್ಳ ದಾಖಲೆಗಳನ್ನು ಡಿಜಿಲಾಕರ್ ಆಪ್‌ನಲ್ಲಿ ಸುರಕ್ಷಿತವಾಗಿರಿಸುವ ಸಲುವಾಗಿ ನನ್ನ ಗುರುತು ಅಭಿಯಾನವನ್ನು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ೧,೦೦೦ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗುವುದು.
ಅರಿವು ಕೇಂದ್ರಗಳು ಸಶಕ್ತ
ಅರಿವು ಕೇಂದ್ರಗಳನ್ನು ಬಲಪಡಿಸುವ ದೃಷ್ಠಿಯಿಂದ ೧೩೨ ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು ಮತ್ತು ಪುಸ್ತಕಗಳು, ಡಿಜಿಟಲ್ ಉಪಕರಣಗಳು ಹಾಗೂ ವಿಕಲಚೇತನ ಸ್ನೇಹಿ ಉಪಕರಣಗಳನ್ನು ಖರೀದಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಸದರಿ ವ್ಯವಸ್ಥೆಯನ್ನು ಸುಸ್ಥಿರವಾಗಿ ನಿರ್ವಹಿಸಲು, ತ್ಯಾಜ್ಯವನ್ನು ಕಡಿಮೆ ಮಾಡುವ, ಪುನಃ ಬಳಸುವ ಮತ್ತು ಮರಳಿ ಉಪಯೋಗಿಸುವ ತತ್ವಗಳಾಧಾರಿತ ವರ್ತುಲ ಆರ್ಥಿಕತೆ ಮಾದರಿಯನ್ನು ಪ್ರಸಕ್ತ ಸಾಲಿನಿಂದ ಪ್ರೋತ್ಸಾಹಿಸಲಾಗುವುದು. ಗ್ರಾಪಂಗಳು ಆರೋಗ್ಯ ರಕ್ಷಣೆ, ಘನತ್ಯಾಜ್ಯ ನಿರ್ವಹಣೆ, ಗ್ರಂಥಾಲಯ ನವೀಕರಣ ಮುಂತಾದ ಕ್ಷೇತ್ರಗಳಲ್ಲಿ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಈ ದಿಸೆಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಸಾಮಾಜಿಕ ಕಳಕಳಿಯುಳ್ಳ ಸ್ಪಂದನಾಶೀಲ ಹಾಗೂ ಸಮರ್ಥ ಗ್ರಾಮ ಸರ್ಕಾರಗಳನ್ನಾಗಿ ರೂಪಿಸಲು ಕ್ರಮವಹಿಸಲಾಗುವುದು.