ಪಶು ವೈದ್ಯಕಿಯ ವಿವಿ ಘಟಿಕೋತ್ಸವ ನಾಳೆ : ರಾಘವೇಶ್‌ಗೆ ಸಂದಲಿವೆ ೧೬ ಚಿನ್ನದ ಪದಕ

Advertisement

ಬೀದರ್ : ಇಲ್ಲಿಯ ಹೊರವಲಯ ನಂದಿ ನಗರದಲ್ಲಿರುವ ಕರ್ನಾಟಕ ಪಶು ವೈದ್ಯಕಿಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ೧೩ನೇ ಘಟಿಕೋತ್ಸವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅ. ೧೬ ರಂದು ಬೆಳಿಗ್ಗೆ ೧೧.೩೦ ಕ್ಕೆ ಹಮ್ಮಿಕೊಳ್ಳಲಾಗುವುದು.

ವಿಶ್ವವಿದ್ಯಾಲಯಗಳ ಕುಲಾಧಿಪತಿಗಳು ಕೂಡ ಆಗಿರುವ ಥಾವರಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅಭ್ಯರ್ಥಿಗಳಿಗೆ ಚಿನ್ನದ ಪದಕ ಮತ್ತು ಪದವಿ ಪ್ರದಾನ ಮಾಡಲಿದ್ದಾರೆ. ಗದಗ್‌ನಲ್ಲಿರುವ ಪಶು ವೈದ್ಯಕಿಯ ಮಹಾವಿದ್ಯಾಲಯದಲ್ಲಿನ ಪಶು ವೈದ್ಯಕಿಯ ಮತ್ತು ಪಶು ಸಂಗೋಪನೆ ಪದವಿ ಕೋರ್ಸಿಗೆ ೨೦೨೧-೨೨ ರಲ್ಲಿ ನಡೆದ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ ವಿದ್ಯಾರ್ಥಿ ಮಂಡ್ಯ ಜಿಲ್ಲೆಯ ಎ.ಎನ್ ರಾಘವೇಶ್‌ಗೆ ಘಟಿಕೋತ್ಸವ ಸಂದರ್ಭದಲ್ಲಿ ೧೬ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು. ಮುಂಬರುವ ಶೈಕ್ಷಣಿಕ ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪಶು ವೈದ್ಯಕಿಯ ಮಹಾವಿದ್ಯಾಲಯ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ.ವೀರಣ್ಣ ಸುದ್ದಿಗಾರರಿಗೆ ತಿಳಿಸಿದರು. ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗ ನಿವಾರಣೆ ಕುರಿತಾದ ಸುಧಾರಿತ ಲಸಿಕೆ ಆದಷ್ಟು ಬೇಗನೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.