ಪಾಕ್ ಜತೆ ಕ್ರಿಕೆಟ್ ಆಡಲೇಬಾರದು

Advertisement

ಮಂಗಳೂರು: ನಾಳೆ ನಡೆಯುವ ಭಾರತ – ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟದ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ‘ಪಾಕಿಸ್ತಾನದ ಜೊತೆ ನಾವು ಕ್ರಿಕೆಟ್ ಆಟ ಆಡಲೇಬಾರದು’ ಎಂದಿದ್ದಾರೆ.
ಖಾಸಗಿ ದೃಶ್ಯವಾಹಿನಿಗೆ ಈ ಕುರಿತು ನೀಡಿದ ಪ್ರತಿಕ್ರಿಯೆಯಲ್ಲಿ ಅವರು, ಟಿ೨೦ ಮ್ಯಾಚ್ ನಡೆಯುತ್ತಿರುವುದು ಸಂತೋಷದ ವಿಚಾರ. ನಾನು ಸಹ ಕ್ರಿಕೆಟ್ ಆಟಗಾರ ಮತ್ತು ಅಭಿಮಾನಿ. ಅದಕ್ಕಿಂತ ಮಿಗಿಲಾಗಿ ನಾನು ಭಾರತ ದೇಶದ ಪ್ರಜೆ. ನಾವು ಪಾಕಿಸ್ತಾನದ ಜೊತೆ ಕ್ರಿಕೆಟ್ ಆಟ ಆಡಲೇಬಾರದು. ಪಾಕಿಸ್ತಾನದವರು ಇಲ್ಲಿ ಬಂದಾಗ ವಿರೋಧಿಸಿದ್ದನ್ನು ನೋಡಿದ್ದೇವೆ. ಭಾರತ ದೇಶದಲ್ಲಿ ಅವರ ಜತೆ ಪಂದ್ಯ ಬ್ಯಾನ್ ಮಾಡಲಾಗಿದೆ. ಆಗಿದ್ದೂ ಹೊರದೇಶದಲ್ಲಿ ಯಾಕೆ ಆಟ ಆಡಿಸಬೇಕು. ಅವರು ಸರಿಯಾಗುವ ತನಕ ಅವರ ಜತೆ ಪಂದ್ಯ ಆಡುವುದೇ ಬೇಡ. ಇದು ನನ್ನ ವೈಯಕ್ತಿಕ ಅಂತರಾಳದ ಅನಿಸಿಕೆ ಎಂದಿದ್ದಾರೆ.
ಒಂದು ವೇಳೆ ಬಾಂಧವ್ಯ ಸರಿಯಾಗಿದ್ದರೆ ಮತ್ತೆ ನಮ್ಮಲ್ಲಿ ಯಾಕೆ ಆಡುವುದಿಲ್ಲ, ಮ್ಯಾಚ್ ಆಯೋಜಿಸುವವರು ಈ ರೀತಿಯ ಗೊಂದಲ ಮಾಡಬಾರದು. ಈಗ ಆಟ ಆಡಲೇಬೇಕು ಎಂದು ನಿರ್ಧಾರವಾಗಿದೆ. ಭಾರತ ದೇಶ ಟಿ೨೦ ವಿಶ್ವಕಪ್ ಗೆಲ್ಲಬೇಕು. ಗೆಲುವಷ್ಟೇ ಅಲ್ಲ, ಗೌರವದ ಗೆಲುವಾಗಬೇಕು. ಪಾಕಿಸ್ತಾನವನ್ನು ಸೋಲಿಸುವುದು ಮಾತ್ರವಲ್ಲ, ಅವರನ್ನು ಹೀನಾಯವಾಗಿ ಸೋಲಿಸಬೇಕು ಎಂದಿದ್ದಾರೆ.