ಪಿಎಸ್‌ಐ ಹಗರಣ: ಆಡಿಯೋ ವೈರಲ್, 15 ಲಕ್ಷ ರೂ. ಪಡೆದ ಬಿಜೆಪಿ ಶಾಸಕ?

ಆಡಿಯೋ ವೈರಲ್
Advertisement

ಕೊಪ್ಪಳ: ರಾಜ್ಯಾದ್ಯಂತ ಪಿಎಸ್‌ಐ ಹಗರಣ ಭಾರೀ ಸದ್ದು ಮಾಡಿತ್ತು. ಐಎಎಸ್ ಅಧಿಕಾರಿಗಳು ಶಾಮೀಲಾಗಿದ್ದರು. ಅವರನ್ನು ಎಡೆಮುರಿ ಕಟ್ಟಲಾಗಿತ್ತು. ಆದರೆ, ಈಗ ಆಡಳಿತ ಪಕ್ಷದ ಬಿಜೆಪಿ ಶಾಸಕ ನೇಮಕಾತಿ ಮಾಡಿಸಿಕೊಡುವುದಾಗಿ 15 ಲಕ್ಷ ರೂ. ಹಣ ಪಡೆದ ಆರೋಪ ಕೇಳಿಬಂದಿದ್ದು, ಈ ಕುರಿತು ಶಾಸಕ ಬಸವರಾಜ ದಡೇಸಗೂರು ಎನ್ನಲಾದ ಆಡಿಯೋ ಕೂಡಾ ವೈರಲ್ ಆಗಿದೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪಾದ ಪರಸಪ್ಪ ಬೇಗೂರು ಎಂಬುವವರು ಕನಕಗಿರಿ ಶಾಸಕ ಬಸವರಾಜ ದಡೇಸಗೂರಗೆ ಕರೆ ಮಾಡಿ, ನನ್ನ ಮಗನ ಪಿಎಸ್‌ಐ ನೇಮಕಾತಿಗೆ ಕೊಟ್ಟ 15 ಲಕ್ಷ ರೂ. ವಾಪಸ್ ಕೊಡಿ ಎಂದು ಕೇಳಿದ್ದು, ಇದಕ್ಕೆ ಶಾಸಕರು ಸರ್ಕಾರಕ್ಕೆ ನೀಡಿದ ನಿನ್ನ ಹಣ ಬೆಂಗಳೂರಿನಿಂದ ಬಂದು ನೀಡುವುದಾಗಿ ಹೇಳಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಸಕ ಬಸವರಾಜ ದಡೇಸಗೂರು ಅವರದ್ದು ಎನ್ನಲಾದ ಎರಡು ಆಡಿಯೋ ವೈರಲ್ ಆಗಿವೆ. ಒಂದನೇ ಆಡಿಯೋದಲ್ಲಿ ಪರಸಪ್ಪ ಎನ್ನುವವರು ನನಗೆ ಸಮಸ್ಯೆ ಇದೆ. ನಿಮಗೆ ಕೈ ಮುಗಿಯುತ್ತೇನೆ. ನಾನು ನೀಡಿದ ಹಣ ವಾಪಸ್ ನೀಡುವಂತೆ ಗೋಗರೆದಿದ್ದಾನೆ. ಇದಕ್ಕೆ ಶಾಸಕ ನಾನು ಬೆಂಗಳೂರಿನಿಂದ ಬಂದ ಮೇಲೆ ಬಾರಪ್ಪ ಹಣ ನೀಡುತ್ತೇನೆ. ನಿನಗೆ ಅನುಮಾನ ಬೇಡ. ಖಂಡಿತವಾಗಿಯೂ ಹಣ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಮೊದಲನೇ ಆಡಿಯೋ ಸಂಭಾಷಣೆ

  • ಪರಸಪ್ಪ: ನನ್ನ ಹಣ ಕೊಡಿ. ಕೈ ಮುಗಿತೀನಿ. ಸರ್, ಬರ್ತೀನಿ ಮೂರ್ನಾಲ್ಕು ದಿನ ಆಯಿತು.
  • ಶಾಸಕ: ನಾನು ಬೆಂಗಳೂರಿಗೆ ಬಂದಿದ್ದೇನೆ. ಜಿಲ್ಲಾಧ್ಯಕ್ಷ ದೊಡ್ಡನಗೌಡ ಹತ್ತಿರ ಮಾತನಾಡಿದ್ದೇನೆ.
  • ಪರಸಪ್ಪ: ಹೌದು ಸರ್, ದೊಡ್ಡನಗೌಡರು ನಮಗೆ ಬೇಕಾದವರು.
  • ಶಾಸಕ: ನನಗೆ ಯಾರಿಂದಲೂ ಹೇಳಿಸುವುದು, ಕೇಳಿಸುವುದು ಬೇಕಾಗಿಲ್ಲ. ದುಡ್ಡು ವಾಪಸ್ ಕೊಡುತ್ತೇನೆ.
  • ಪರಸಪ್ಪ: ಹಣ ಕೊಟ್ಟು ಒಂದೂವರೆ ವರ್ಷ ಆಯಿತು ಸರ್.
  • ಶಾಸಕ: ಹಣ ಪಡೆದಿದ್ದೇನೆ ಸರ್ಕಾರಕ್ಕೆ ಕೊಟ್ಟ ಹಣ ಅದು. ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ಕೊಡುತ್ತೇನೆ.
  • ಪರಸಪ್ಪ: ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ನಿಮ್ಮ ಬಳಿ ಬರುವೆ. ಹಣದ ತೊಂದರೆಯಾಗಿದೆ.
  • ಶಾಸಕ: ಬಾರಪ್ಪ, ಅನುಮಾನ ಬೇಡ. ಹಣ ಖಂಡಿತಾ ಕೊಡುತ್ತೇನೆ.

ಎರಡನೇ ಆಡಿಯೋದಲ್ಲಿ ಮಾತು ಆರಂಭಿಸುತ್ತಲೇ ಶಾಸಕರು ಪರಸಪ್ಪನನ್ನು ಗದರಿಸಿದ್ದಾರೆ. ನೀನು ಕೋಟಿ ರೂಪಾಯಿ ನೀಡಿದ್ದೀಯಾ?, ನಾನು ನಿನ್ನ ಮನೆ ಬಾಗಿಲಿಗೆ ಬಂದು ಹಣ ಕೇಳಿದ್ದೇನಾ?. ನೀನು ಯಾವ ಕೆಲಸಕ್ಕೆ ಕೊಟ್ಟಿದ್ದೀಯಾ ಎನ್ನುವುದು ಗೊತ್ತಿದೆನಾ ಎಂದು ಶಾಸಕ ಆಕ್ರೋಶ ಬರಿತವಾಗಿ ಮಾತನಾಡಿದ್ದಾರೆ. ಇದಕ್ಕೆ ಪರಸಪ್ಪ ನಾನು ಬಡವ. ನನಗೆ ಬಹಳ ತೊಂದರೆ ಆಗಿದ್ದು, ಹಣ ಬೇಗ ನೀಡುವಂತೆ ಮನವಿ ಮಾಡಿದ್ದಾನೆ. ಕೊನೆಗೆ ಶಾಸಕರ ಮಾತಿಗೆ ಬೇಸತ್ತ ಪರಸಪ್ಪ ನೀಡುತ್ತಿರೋ, ಇಲ್ಲವೋ ಹೇಳಿಬಿಡಿ. ಹಣ ನೀಡುವುದಿಲ್ಲ ಎಂದರೆ ನಾನು ನಿಮ್ಮನ್ನು ಕೇಳುವುದಿಲ್ಲ ಎಂದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹಣ ನೀಡುವುದಿಲ್ಲ ಎಂದು ನಾನು ಚಿಲ್ಲರೆ ಮಾತನಾಡುವುದಿಲ್ಲ ಎಂದು ಗೌರವದಿಂದ ಮಾತನಾಡುವಂತೆ ಬೆದರಿಕೆ ಹಾಕಿದ್ದಾರೆ.

ಎರಡನೇ ಆಡಿಯೊ ಸಂಭಾಷಣೆ

  • ಶಾಸಕ: ನನಗೆ ಎಷ್ಟು ಕೋಟಿ ಹಣ ಕೊಟ್ಟಿದ್ದೀಯಪ್ಪ
  • ಪರಸಪ್ಪ: ಸರ್, ೧೫ ಲಕ್ಷ ರೂ. ಕೊಟ್ಟಿದ್ದೇನೆ.
  • ಶಾಸಕ: ನಿನಗೆ ಮಾನ ಮರ್ಯಾದೆ ಎನಾದರೂ ಇದೆಯಾ, ಇಲ್ಲವಾ? ಯಾರ ಮುಂದೆ ಎನು ಮಾತನಾಡಬೇಕು ಎನ್ನುವ ಸೌಜನ್ಯ ಇದೆಯೊ ಇಲ್ಲವೊ?
  • ಪರಸಪ್ಪ: ಎಲ್ಲಾ ಹೇಳಿದ್ದೇವಲ್ಲ ಸರ್.
  • ಶಾಸಕ: ಹಣ ಕೊಡು ಎಂದು ನಾನೇನು ನಿಮ್ಮ ಮನೆಗೆ ಬಂದಿದ್ದೆನಾ? ನಿನ್ನ ಉದ್ದೇಶವೇನು? ನೀನು ಯಾವ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ? ಅದನ್ನು ಹೇಗೆ ಕೇಳಬೇಕು ಎನ್ನುವ ಸೌಜನ್ಯವಿಲ್ಲವಾ? ಹುಚ್ಚನ ರೀತಿಯಲ್ಲಿ ಮಾತನಾಡುತ್ತಿದ್ದೀಯಾ? ಎಲ್ಲರೂ ನನಗೆ ಪೋನ್ ಕರೆ ಮಾಡುತ್ತಿದ್ದಾರೆ. ಹಿಂಗೆ ಕೇಳಿದರೆ ಬಹಳ ನಿಷ್ಠುರವಾಗಿ ಮಾತನಾಡಬೇಕಾಗುತ್ತದೆ. ಸಾಲ ಕೊಡು ಎಂದು ಕೇಳಲು ನಿನ್ನ ಮನೆಗೆ ಬಂದಿದ್ದೇನಾ? ಗೌರವದಿಂದ ಕೊಟ್ಟಿದ್ದೀಯಾ. ನಾಲ್ಕು ದಿನ ಹೆಚ್ಚು ಕಡಿಮೆ ಆಗುತ್ತದೆ. ಹಣ ನಾನೇ ಹೇಳಿ ಕೊಡಿಸುತ್ತೇನೆ. ಅದಕ್ಕೆ ನಾನು ಜವಾಬ್ದಾರಿಯಾಗಿದ್ದೇನೆ. ನಿನ್ನ ಅವಸರಕ್ಕೆ, ನಿನ್ನ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ. ಹಣ ಬೇರೆಯವರ ಕಡೆ ಇದೆ. ಅನುಕೂಲ ಮಾಡಿ ವಾಪಸ್ ಕೊಡಿಸುವೆ. ನೋಡ್ರಿ ಪರಸಪ್ಪ ಮಾತು ಲೂಸ್ ಆಗಿದ್ರೆ ಸರಿಇರಲ್ಲ. ನಿನ್ನ ಹಣದಿಂದ ನನಗೆ ಎನೂ ಆಗಬೇಕಾಗಿಲ್ಲ. ಮಾತನಾಡಬೇಕಾದರೆ ಬಹಳ ಗೌರವದಿಂದ ಇರಬೇಕು. ಹಣ ಕೊಟ್ಟಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.
  • ಪರಸಪ್ಪ: ನಾನು ಬಡವ ಇದ್ದೇನೆ ಸರ್.
  • ಶಾಸಕ: ನೀನು ಬಡವ, ಶ್ರೀಮಂತ ಏನೇ ಆಗಿರು. ಮಾತು ಸರಿಯಾಗಿ ಇರಬೇಕು.
  • ಪರಸ್ಪಪ್ಪ: ಸರ್, ಹಣ ಕೊಡುವುದಾದರೆ ಕೊಡಿ. ಇಲ್ಲವಾದರೆ ಇಲ್ಲ ಎಂದು ಹೇಳಿಬಿಡಿ.
  • ಶಾಸಕ: ನಾನು ಕೊಡ್ತೀನಿ. ಇವೆಲ್ಲ ಹೇಳಬೇಡ. ನಿನ್ನ ಬಳಿ ಸಾಲ ತಂದಿಲ್ಲ. ಇಷ್ಟೇ ದಿನದಲ್ಲಿ ಕೊಡ್ತೇನೆ ಎಂದು ಹೇಳಿದ್ನಾ?
  • ಪರಸಪ್ಪ: ಕೊಡುವುದಿಲ್ಲ ಎಂದು ಹೇಳಿ ಬಿಡಿ ಸರ್.
  • ಶಾಸಕ: ಕೊಡುವುದಿಲ್ಲ ಎಂದು ನಾನು ಯಾಕೆ ಹೇಳಲಿ. ಅಂತ ಚಿಲ್ಲರೆ ಕೆಲಸ ಮಾಡುವುದಿಲ್ಲ.