ಪಿತೃಪಕ್ಷದ ಮಹತ್ವ

Advertisement

ಭಾದ್ರಪದ ಕೃಷ್ಣ ಪಕ್ಷ ಆರಂಭವಾಗಿದೆ. ಇದನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಮನುಷ್ಯನಿಗೆ ಪಿತೃಋಣ ಅತ್ಯಂತ ಮುಖ್ಯವಾಗಿದ್ದು ಅಂದರೆ ತಿಳಿಸಲೇಬೇಕಾದ ಸಾಲ. ಹುಟ್ಟುವಾಗಲೇ ಈ ಋಣ ಕಟ್ಟಿಕೊಂಡು ಬರುತ್ತದೆ. ಯಾಕೆಂದರೆ ಹುಟ್ಟು ತಂದೆ-ತಾಯಿಗಳಿಂದಲೇ ಆಗಿರುತ್ತದೆ. ಒಂದು ಮಗು ಹುಟ್ಟಿ ಸಂಸ್ಕಾರಯುತವಾಗಿ ಬೆಳೆಯುವಾಗ ತಂದೆ ತಾಯಂದಿರ ಶ್ರಮ ತುಂಬಾ ಇರುತ್ತದೆ. ಇಲ್ಲಿ ಪಿತೃ ಎಂಬ ಶಬ್ದಕ್ಕೆ ಕೇವಲ ತಂದೆ ಎಂಬುದಾಗಿ ಮಾತ್ರ ಅರ್ಥವಲ್ಲ. ತಾಯಿಯನ್ನು ಸೇರಿಸಿಕೊಂಡೇ ಪಿತೃ ಶಬ್ದ ಬಳಕೆಯಾಗಿದೆ. ಸಂಸ್ಕೃತ ವ್ಯಾಕರಣದ ಪ್ರಕಾರ ಪಿತಾ ಮತ್ತು ಮಾತಾ ಎರಡು ಶಬ್ದ ಕೂಡಿದಾಗ ಪಿತರೌ ಎಂಬುದಾಗಿ ಒಂದೇ ಶಬ್ದ ಉಳಿದುಕೊಳ್ಳುತ್ತದೆ. ಶ್ರಾದ್ಧ ತರ್ಪಣಗಳಲ್ಲಿ ತಂದೆಯ ಕಡೆ ಪೂರ್ವಜರಿಗೆ ತರ್ಪಣ ನೀಡುವಂತೆ ತಾಯಿಯ ಪೂರ್ವಜರಿಗೂ ತರ್ಪಣಾದಿಗಳನ್ನು ನೀಡಲಾಗುತ್ತದೆ.
ಪಿತೃ ಋಣಗಳನ್ನು ತೀರಿಸಲು ಉಪಾಯಗಳನ್ನು ಋಷಿಗಳು ಕೊಟ್ಟಿದ್ದಾರೆ. “ಜೀವತೋಃ ವಾಕ್ಯಕರಣಾತ್ ಮೃತಾಹೇ ಭೂರಿ ಭೋಜನಾತ್ ಗಯಾಯಾಂ ಪಿಂಡಾದಾನಾಚ್ಚ ತ್ರಿಭಿಃ ಪುತ್ರಸ್ಯ ಪುತ್ರತಾ |” ತಾಯಿ-ತಂದೆಯಂದಿರು ಬದುಕಿರುವವರೆಗೆ ಅವರ ಮಾತನ್ನು ನಡೆಸಬೇಕು. ಮರಣವಾದ ದಿನ ಅನ್ನದಾನ ಮೊದಲಾದವುಗಳನ್ನು ಮಾಡಬೇಕು. ಒಮ್ಮೆಯಾದರೂ ಗಯಾದಂತಹ ಪುಣ್ಯಕ್ಷೇತ್ರಗಳಲ್ಲಿ ಪಿಂಡ-ತರ್ಪಣಗಳನ್ನು ಮಾಡಬೇಕು.
ಪಿತೃತ್ವ ತಂದೆ-ತಾಯಿತನ (ಅದು ಧರ್ಮಸಮ್ಮತವಾಗಿದ್ದರೆ) ಭಗವಂತನಿಗೆ ಸೇರಿದ್ದು. ಭಗವಂತನ ಅನುಗ್ರಹದಿಂದಲೇ ತಂದೆತನ ಅಥವಾ ತಾಯ್ತನ ಬರುತ್ತದೆ. ಪಿತೃತ್ವ ದಿವ್ಯವಾದ್ದರಿಂದಲೇ ಶ್ರೀ ರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೋದನು. ಭೀಷ್ಮನು ಇಚ್ಛಾಮರಣವನ್ನು ಮಗನಿಗೆ ಅನುಗ್ರಹಿಸಿದವ ಆತನ ತಂದೆ, ಶಂತನು. ಶಂತನು ಋಷಿಯಲ್ಲ, ರಾಜ. ಅವನಿಗೇ ಸ್ವತಃ ಇಲ್ಲದ ಇಚ್ಛಾಮರಣ ಮರಣವನ್ನು ಮಗನಿಗೆ ಅನುಗ್ರಹಿಸಿದ. ಈ ಅನುಗ್ರಹವಾದ್ದು ಭಗವದಂಶವಾದ ಪಿತೃತ್ವದಿಂದ. ಆದ್ದರಿಂದ ಪಿತೃತ್ವ ಮಾತೃತ್ವಗಳು ಪೂಜನೀಯ.
ವಿಶ್ವದಲ್ಲಿ ತಂದೆಯಂದಿರ ದಿನ, ತಾಯಂದಿರ ದಿನಗಳನ್ನು ಒಂದು ದಿನ ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ತಂದೆ ತಾಯಿಂದಿರ ದಿನವನ್ನು ೧೫ ದಿನಗಳ ಕಾಲ ಆಚಾರಿಸಲಾಗುತ್ತದೆ ಎಂದು ಹೇಳಬಹುದು. ಅಕ್ಟೋಬರ್ ೨ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿ ನಡೆಯಿತು. ನಮ್ಮ ಮನೆಯ ಪಿತೃಗಳ ಜೊತೆ ರಾಷ್ಟ್ರಪಿತ ಸ್ಮರಣೆಗೂ ಸೇರಿಕೊಂಡಿದೆ ಬದುಕಿಗೆ ಹಿರಿಯರ ಆಶೀರ್ವಾದಬೇಕೆಂಬ ಭಾವ ಗಾಢವಾಗಿ ಬೆಳೆಯಲಿ.