ಪೆಟ್ರೋಲ್ ೭೫ ರೂ. ಎಲ್‌ಪಿಜಿ ೫೦೦ ರೂ. : ಡಿಎಂಕೆ ಪ್ರಣಾಳಿಕೆ

Advertisement

ಚೆನ್ನೈ: ಲೋಕಸಭೆ ಚುನಾವಣೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ಡಿಎಂಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಸಹ ಪ್ರಕಟಿಸಿದೆ. ಪುದುಚೆರಿಗೆ ರಾಜ್ಯದ ಸ್ಥಾನಮಾನ, ನೀಟ್ ಪರೀಕ್ಷೆ ನಿಷೇಧ ಮುಂತಾದ ಭರವಸೆಗಳನ್ನು ನೀಡಿದೆ. ರಾಜ್ಯಪಾಲರ ಕಚೇರಿಯನ್ನು ರದ್ದುಗೊಳಿಸಬೇಕು. ಅದುವರೆಗೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ರಾಜ್ಯಪಾಲರನ್ನು ನೇಮಿಸಬೇಕು ಎಂದು ಪ್ರಣಾಳಿಕೆಯಲ್ಲಿ ಅದು ಆಗ್ರಹಿಸಿದೆ. ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಇದು ಡಿಎಂಕೆ ಪ್ರಣಾಳಿಕೆ ಮಾತ್ರವಲ್ಲ, ಜನರ ಪ್ರಣಾಳಿಕೆಯಾಗಿದೆ ಎಂದು ಬಣ್ಣಿಸಿದರು. ಬಿಜೆಪಿ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ನಂತರ ಭಾರತವನ್ನು ಹಾಳುಗೆಡವಿದ್ದಾರೆ. ಭರವಸೆಗಳನ್ನು ಈಡೇರಿಸಲಿಲ್ಲ, ಇದೀಗ ನಾವು ಇಂಡಿಯಾ ಬ್ಲಾಕ್ ಮೈತ್ರಿಕೂಟ ರಚಿಸಿಕೊಂಡಿದ್ದು, ಈ ಬಾರಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದರು. ತಮಿಳುನಾಡಿನಲ್ಲಿ ಡಿಎಂಕೆ ೨೧ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಚೆನ್ನೈ ಕೇಂದ್ರದಿಂದ ದಯಾನಿಧಿ ಮಾರನ್, ಚೆನ್ನೈ ಉತ್ತರದಿಂದ ಕಲಾನಿಧಿ ವೀರಸಾಮಿ, ತೂತ್ತುಕೂಡಿಯಿಂದ ಕನಿಮೋಳಿ, ಶ್ರೀಪೆರಂಬೂರ್‌ನಿಂದ ಟಿ.ಆರ್.ಬಾಲು ಸ್ಪರ್ಧಿಸಲಿದ್ದಾರೆ.